ಪುತ್ತೂರು: ಹನುಮಗಿರಿ ಶ್ರೀ ಕೋಮಂಡರಾಮ ಹಾಗೂ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಅಯೋಧ್ಯೆಯ ಶ್ರೀ ರಾಮ ಜನ್ಮಸ್ಥಾನ ಮಂದಿರದಿಂದ ಹೊರಟ ಪವಿತ್ರ ಜ್ಯೋತಿ ಮಂಗಳವಾರ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಜನ್ಮಸ್ಥಳ ಜ್ಯೋತಿಯೊಂದಿಗೆ ಸಂಗಮಗೊಂಡು ದಕ್ಷಿಣ ಕನ್ನಡ ಜಿಲ್ಲೆಯತ್ತ ಪ್ರಯಾಣ ಆರಂಭಿಸಿದೆ.

ಶ್ರೀರಾಮನವಮಿ ದಿನವಾದ ಮಾರ್ಚ್ 27ರಂದು ಅಯೋಧ್ಯೆಯ ಮಂದಿರದ ಗರ್ಭಗುಡಿಯಿಂದ ಸ್ವೀಕರಿಸಿದ ಶ್ರೀರಾಮ ಜ್ಯೋತಿಯನ್ನು ಗಂಗಾಜಲ ಹಾಗೂ ಅಯೋಧ್ಯೆಯ ಪವಿತ್ರ ಮೃತ್ತಿಕೆಯೊಂದಿಗೆ ಕರ್ನಾಟಕದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಕೊಂಡೊಯ್ಯಲಾಗಿತ್ತು. ಮಂಗಳವಾರ ಬೆಳಗ್ಗೆ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯ ಜನ್ಮಸ್ಥಳ ಮಂದಿರದಲ್ಲಿ ಜ್ಯೋತಿ ಸ್ವೀಕರಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಹಿಂದೂ ಸಂಘಟನೆ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು, “ಬೆಳಗ್ಗೆ 8 ಗಂಟೆಗೆ ಅಯೋಧ್ಯೆಯ ಜ್ಯೋತಿಯನ್ನು ಅಂಜನಾದ್ರಿಗೆ ಕೊಂಡೊಯ್ದು, ಅಲ್ಲಿನ ಆಂಜನೇಯ ಜ್ಯೋತಿಯನ್ನು ಪಡೆದುಕೊಂಡೆವು. ಬಳಿಕ ಬೆಟ್ಟದ ತಪ್ಪಲಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಧ್ಯಕ್ಷೇತ್ರೀಯ ಕಾರ್ಯವಾಹ ತಿಪ್ಪೇ ಸ್ವಾಮಿ ಅವರು ತೆಂಗಿನಕಾಯಿ ಒಡೆದು ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಅಯ್ಯನ ಗೌಡ, ಚಂದ್ರಶೇಖರ, ಕೃಷ್ಣಮೂರ್ತಿ, ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







ಪುತ್ತೂರಿನಿಂದ ವಿಶೇಷ ಬಸ್ಸಿನಲ್ಲಿ ತೆರಳಿದ್ದ 11 ಮಂದಿ ಶ್ರೀರಾಮ ಭಕ್ತರು ದೇವರ ಜ್ಯೋತಿ, ಪಂಪಾ ಸರೋವರದ ನೀರು ಹಾಗೂ ಋಷ್ಯಮುಖ ಪರ್ವತದ ಮೃತ್ತಿಕೆ ಸ್ವೀಕರಿಸಿಕೊಂಡು ಊರಿನತ್ತ ಮರಳುತ್ತಿದ್ದಾರೆ. ಏಪ್ರಿಲ್ 1ರಂದು ಕಾರ್ಕಳದಲ್ಲಿ ಭವ್ಯ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದೆ. ಬಳಿಕ ಅವಳಿ ಜ್ಯೋತಿಗಳನ್ನು ಅಲಂಕೃತ ರಥಕ್ಕೆ ಸ್ಥಳಾಂತರಿಸಲಾಗುತ್ತದೆ.
ಏಪ್ರಿಲ್ 2ರಿಂದ ಶ್ರೀರಾಮ–ಆಂಜನೇಯ ಜ್ಯೋತಿ ರಥಯಾತ್ರೆ ಪುತ್ತೂರು, ಕಡಬ, ಸುಳ್ಯ ತಾಲೂಕುಗಳೊಂದಿಗೆ ಕಾಸರಗೋಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಸುಮಾರು 60 ಗ್ರಾಮಗಳ ಪರ್ಯಟನೆ ನಡೆಸಲಿದೆ. ಈ ಅವಧಿಯಲ್ಲಿ ಪ್ರತಿಯೊಂದು ಗ್ರಾಮದಲ್ಲೂ ದೇವಸ್ಥಾನಗಳಲ್ಲಿ ಜ್ಯೋತಿ ರಥಕ್ಕೆ ಭವ್ಯ ಸ್ವಾಗತ ನೀಡಲಾಗುತ್ತದೆ.
ಏಪ್ರಿಲ್ 8ರಂದು ರಥ ಹನುಮಗಿರಿಗೆ ತಲುಪಲಿದ್ದು, ಏಪ್ರಿಲ್ 9ರಿಂದ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಮಹೋತ್ಸವವು ಭಕ್ತಿಭಾವದಿಂದ ನಡೆಯಲಿದೆ.


