ಪುತ್ತೂರು: ಸನಾತನ ಧರ್ಮದ ರಕ್ಷಣೆ ಮಾಡುವವರನ್ನು ಸದಾ ಬೆಂಬಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ಮೂಲಕ ಧರ್ಮ ರಕ್ಷಣೆ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕಂಚಿಪುರದ ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಶನಿವಾರ ನಡೆದ ಧರ್ಮ ಸಂದೇಶ ಕಲಾಪದಲ್ಲಿ ಅವರು ಮಾತನಾಡಿದರು.

ಹಿಂದುವಾಗಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ. ವ್ಯಕ್ತಿಗತ ಜೀವನದಲ್ಲಿ ವಿನಯ ಮತ್ತು ಸಮಷ್ಟಿ ಚಿಂತನೆಗಳಲ್ಲಿ ಗರ್ವ ಇದ್ದಾಗ ಮಾತ್ರ ಸಮಾಜದಲ್ಲಿ ಧರ್ಮ ರಕ್ಷಣೆ ಸಾಧ್ಯವಾಗುತ್ತದೆ. ವೈದಿಕ ಪರಂಪರೆಯ ಕುಟುಂಬಗಳು ವೇದಾಧ್ಯಯನವನ್ನು ಮುಂದುವರಿಸಬೇಕು. ಪ್ರತಿ ಮನೆಯಲ್ಲೂ ಕನಿಷ್ಠ ಒಬ್ಬರಾದರೂ ವೇದ ಅಧ್ಯಯನ ಮಾಡುವ ಮೂಲಕ ಸನಾತನ ಸಂಸ್ಕೃತಿ ಉಳಿಸಬೇಕು ಎಂದು ಅವರು ತಿಳಿಸಿದರು. ಹನುಮಗಿರಿ ಕ್ಷೇತ್ರದಲ್ಲಿ ಶ್ರೀರಾಮ ಮತ್ತು ಹನುಮರ ಸಮ್ಮಿಳಿತ ಶಕ್ತಿ ನೆಲೆಸಿದ್ದು, ಈ ಕ್ಷೇತ್ರದ ಮೂಲಕ ವಿದ್ಯೆ, ವೈದ್ಯಕೀಯ ಮತ್ತು ಸಣ್ಣ ಉದ್ಯಮಗಳಿಗೆ ಉತ್ತೇಜನ ಸಿಗಬೇಕು ಎಂದರು.
ಈ ಸಂದರ್ಭದಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ತೀರ್ಥ ಸ್ವಾಮೀಜಿ ಸಂದೇಶ ನೀಡಿ, ಶ್ರೀರಾಮನ ವ್ಯಕ್ತಿತ್ವ ಅತ್ಯಂತ ಶ್ರೇಷ್ಠವಾಗಿದ್ದು, ಇತಿಹಾಸದಲ್ಲಿ ಅವರಷ್ಟು ಆದರ್ಶ ವ್ಯಕ್ತಿತ್ವದ ಮನುಷ್ಯರು ವಿರಳ ಎಂದರು. ಶಿವನ ಅವತಾರವಾದ ಆಂಜನೇಯನು ಹನುಮಗಿರಿಯಲ್ಲಿ ಪಂಚಮುಖಿಯಾಗಿ ನೆಲೆಸಿರುವುದು ಈ ಕ್ಷೇತ್ರದ ಪಾವಿತ್ರ್ಯವನ್ನು ಹೆಚ್ಚಿಸಿದೆ ಎಂದು ಹೇಳಿದರು.
ರಾಮನಾಮದ ಮಹತ್ವವನ್ನು ವಿವರಿಸಿದ ಅವರು, 13 ಸಾವಿರ ಭಕ್ತರು ದೀಕ್ಷೆ ಮೂಲಕ ರಾಮನಾಮ ಜಪ ಮಾಡಿದದ್ದು ಇತಿಹಾಸ ಸೃಷ್ಟಿಯಾಗಿದೆ ಎಂದರು. ರತ್ನಾಕರನು ವಾಲ್ಮೀಕಿ ಮಹರ್ಷಿಯಾಗಲು ಕಾರಣವಾದ ರಾಮನಾಮದ ಶಕ್ತಿ, ಸಾಮಾನ್ಯ ವ್ಯಕ್ತಿಯನ್ನೂ ಶ್ರೇಷ್ಠತೆಯತ್ತ ಕೊಂಡೊಯ್ಯಬಲ್ಲದು. ಪ್ರತಿಯೊಬ್ಬರೂ ಸಾತ್ವಿಕ ಜೀವನವನ್ನು ಅಳವಡಿಸಿಕೊಂಡರೆ ಇಡೀ ಜಗತ್ತು ಧರ್ಮ ಸಾಮ್ರಾಜ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹಿಂದೂ ಸಮಾಜದ ಕಲ್ಯಾಣಕ್ಕೆ ಪೂರಕವಾಗಿವೆ. ತಪಸ್ವಿಗಳ ಚಿಂತನೆ ಮತ್ತು ಮಾರ್ಗದರ್ಶನದಿಂದ ಭಾರತ ಭೂಮಿಯ ತೇಜಸ್ಸು ಹೆಚ್ಚಾಗಿದೆ ಎಂದು ಹೇಳಿದರು.
ಶ್ರೀರಾಮ ತಾರಕ ಮಹಾಯಾಗ ಸಂಪನ್ನ
ಬ್ರಹ್ಮಕಲಶೋತ್ಸವದ ಅಂಗವಾಗಿ ಹನುಮಗಿರಿ ಕ್ಷೇತ್ರದಲ್ಲಿ ಶನಿವಾರ ಶ್ರೀರಾಮ ತಾರಕ ಮಹಾಯಾಗ ಭಕ್ತಿಭಾವದಿಂದ ನೆರವೇರಿತು. ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮತ್ತು ಶ್ರೀ ರಾಘವೇಶ್ವರ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಪೂರ್ಣಾಹುತಿ ನೆರವೇರಿಸಲಾಯಿತು.
ಯಾಗದ ಪೂರ್ವಭಾವಿಯಾಗಿ ಅಷ್ಟೋತ್ತರ ಶತ ನಾಳಿಕೇರ ಗಣಹೋಮ ನಡೆಯಿತು. ಬಳಿಕ 100ಕ್ಕೂ ಹೆಚ್ಚು ವೈದಿಕರು ಜಪ ಪಠಣ ಆರಂಭಿಸಿದರು. ಕಳೆದ ಒಂದು ತಿಂಗಳಿನಿಂದ 13 ಸಾವಿರಕ್ಕೂ ಹೆಚ್ಚು ಭಕ್ತರು ತಮ್ಮ ಮನೆಗಳಲ್ಲಿ ರಾಮನಾಮ ಜಪ ಮಾಡಿದ್ದು, ಒಂದು ಕೋಟಿ ರಾಮನಾಮ ಪಠಣ ಗುರಿ ಸಾಧಿಸಿದ ನಂತರ ಯಾಗ ನೆರವೇರಿಸಲಾಯಿತು.
ಅರಣಿ ಮಥನದ ಮೂಲಕ ಅಗ್ನಿ ಸೃಷ್ಟಿಸಿ ಪ್ರಧಾನ ಕುಂಡದಲ್ಲಿ ಸ್ಥಾಪನೆ ಮಾಡಲಾಯಿತು. 110 ವೈದಿಕರು ಯಾಗದಲ್ಲಿ ಪಾಲ್ಗೊಂಡು 10 ಕುಂಡಗಳಲ್ಲಿ ಹೋಮ ನೆರವೇರಿಸಿದರು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಯಾಗ 11 ಗಂಟೆಗೆ ಪೂರ್ಣಗೊಂಡು ಮಧ್ಯಾಹ್ನ ಪೂರ್ಣಾಹುತಿ ನಡೆಯಿತು.
ಇಂದು ಬ್ರಹ್ಮಕಲಶೋತ್ಸವ
ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ತತ್ವ ಹೋಮ, ಕಲಶ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸಂಜೆ ಅಧಿವಾಸ ಹೋಮ ಮತ್ತು ಧ್ಯಾನಾವಾಸ ಕಾರ್ಯಕ್ರಮಗಳು ನಡೆದವು.
ಏಪ್ರಿಲ್ 12ರಂದು ಪಂಚಮುಖಿ ಆಂಜನೇಯ ಹಾಗೂ ಶ್ರೀ ಕೋದಂಡರಾಮ ದೇವರಿಗೆ ಏಕಕಾಲದಲ್ಲಿ ಬ್ರಹ್ಮಕಲಶೋತ್ಸವ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ, ನಹುಷ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *