ಪುತ್ತೂರು: ಹನುಮಗಿರಿ ಶ್ರೀ ಕೋದಂಡರಾಮ, ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಏಪ್ರಿಲ್ 9ರಿಂದ 12ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಭಾಗವಾಗಿ ಬುಧವಾರ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ವಠಾರದಿಂದ ಭವ್ಯ ಹಸಿರು ಹೊರೆಕಾಣಿಕೆ ಮೆರವಣಿಗೆ ಜರುಗಿತು.
ಸಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ ನೂರಾರು ವಾಹನಗಳಲ್ಲಿ ಹಸಿರು ಹೊರೆಕಾಣಿಕೆ ಸಾಗಿಸಿ ಮೆರವಣಿಗೆ ಭವ್ಯವಾಗಿ ನಡೆಯಿತು. ದರ್ಬೆವರೆಗೆ ಭಕ್ತರು ಕಾಲ್ನಡಿಗೆಯಲ್ಲಿ ಸಾಗಿದ್ದು, ಅಲ್ಲಿಂದ ವಾಹನಗಳ ಮೂಲಕ ಹನುಮಗಿರಿಗೆ ತೆರಳಿದರು. ಮೆರವಣಿಗೆಯಲ್ಲಿ ಶ್ರೀರಾಮ-ಸೀತಾದೇವಿ-ಹನುಮ ವೇಷಧಾರಿಗಳ ವಾಹನ, ಕಲ್ಲಡ್ಕ ಗೊಂಬೆ, ವಾದ್ಯ, ಚೆಂಡೆ ಮೇಳ ಹಾಗೂ ಕುಣಿತ ಭಜಕರ ತಂಡಗಳು ವಿಶೇಷ ಆಕರ್ಷಣೆಯಾಗಿದ್ದವು.
ಇದಕ್ಕೂ ಮುನ್ನ ಬೆಳಿಗ್ಗೆ ಈಶ್ವರಮಂಗಲ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಬಳಿಕ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ ನೆರವೇರಿಸಿ ಭಜನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಜೀವಂಧರ್ ಜೈನ್, ರಾಕೇಶ್ ರೈ ಕೆಡೆಂಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
ಇನ್ನೂ, ಸಮಿತಿ ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ಸಾಜ ರಾಧಾಕೃಷ್ಣ ಆಳ್ವ, ಮುರಳೀಕೃಷ್ಣ ಹಸಂತಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ, ನಹುಷ ಪಿ.ವಿ., ಕೋಟಿ ಶ್ರೀರಾಮತಾರಕ ಜಪಯಜ್ಞ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಮಾಜಿ ಶಾಸಕ ಸಂಜೀವ ಮಠಂದೂರು, ಡಾ. ಸುರೇಶ್ ಪುತ್ತೂರಾಯ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *