ಕಡಬ: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಘಟನೆಗಳನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಟೀಕಿಸುವುದು ಸಾಮಾನ್ಯವಾಗಿದೆ. ಆದರೆ ಕಡಬದಲ್ಲಿ ನಡೆದ ಘಟನೆಯೊಂದು ಸಾರ್ವಜನಿಕ ಜವಾಬ್ದಾರಿ ಮತ್ತು ಮಾನವೀಯತೆಗೆ ಮಾದರಿಯಾಗಿದೆ.




ಮಂಗಳೂರಿನಿಂದ ಕಲ್ಲುಗುಡ್ಡೆ ಕಡೆಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ರಾತ್ರಿ ಸುಮಾರು 8 ಗಂಟೆ ವೇಳೆಗೆ ರಾಮಕುಂಜ ತಲುಪುತ್ತಿದ್ದಂತೆ ತಾಂತ್ರಿಕ ದೋಷದಿಂದ ಎದುರಿನ ಹೆಡ್‌ಲೈಟ್ ಹಾಗೂ ಒಳಗಿನ ಲೈಟ್‌ಗಳು ಏಕಾಏಕಿ ಸ್ಥಗಿತಗೊಂಡವು. ಕತ್ತಲಿನಲ್ಲಿ ಬಸ್ ಸಂಚರಿಸುವುದು ಸಂಚಾರ ನಿಯಮಗಳ ಉಲ್ಲಂಘನೆಯಷ್ಟೇ ಅಲ್ಲ, ಪ್ರಯಾಣಿಕರ ಜೀವಕ್ಕೂ ಅಪಾಯಕಾರಿಯಾಗಿತ್ತು.


ಈ ವೇಳೆ ಬಸ್ಸಿನ ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದ ಕಡಬ ನಿವಾಸಿ ನವೀನ್ ಕಲ್ಲಾಜೆ ಅವರು ಸಮಸ್ಯೆಯನ್ನು ಗಮನಿಸಿ ತಕ್ಷಣ ಪತ್ರಕರ್ತ ದಿವಾಕರ ಅವರ ಗಮನಕ್ಕೆ ತಂದರು. ಬಸ್ ಕಡಬದತ್ತ ಸಾಗುತ್ತಿದ್ದ ವೇಳೆ ದಿವಾಕರ ಅವರು ಚಾಲಕರ ಗಮನ ಸೆಳೆಯಲು ವಿಡಿಯೋ ಚಿತ್ರೀಕರಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕರು ಬಸ್ ನಿಲ್ಲಿಸಿ ಪರಿಶೀಲನೆ ನಡೆಸಿದರು.
ಆದರೆ ಆ ದಿನದ ಕೊನೆಯ ಬಸ್ ಆಗಿದ್ದರಿಂದ ಹಾಗೂ ಮರುದಿನ ಬೆಳಗ್ಗೆ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಕಂಡಕ್ಟರ್ ಮತ್ತು ಪ್ರಯಾಣಿಕರು ಬಸ್ ಮುಂದುವರಿಸಲು ಮನವಿ ಮಾಡಿದರು.


ಬಸ್ ಕಡಬ ಪೇಟೆಗೆ ತಲುಪುತ್ತಿದ್ದಂತೆಯೇ ಪತ್ರಕರ್ತ ದಿವಾಕರ ಅವರು ಸ್ಥಳೀಯರಾದ ಆಲಿ ಹಳೆ ಸ್ಟೇಷನ್ ಹಾಗೂ ರಮೀಜ್ ಪಿಜಕ್ಕಳ ಅವರ ಸಹಕಾರದೊಂದಿಗೆ ಎಲೆಕ್ಟ್ರಿಷಿಯನ್ ಒಬ್ಬರನ್ನು ಸ್ಥಳಕ್ಕೆ ಕರೆಸಿದರು. ಕೆಲವೇ ನಿಮಿಷಗಳಲ್ಲಿ ಹೆಡ್‌ಲೈಟ್ ದೋಷವನ್ನು ಸರಿಪಡಿಸಲಾಯಿತು. ಆರಂಭದಲ್ಲಿ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಿದ ಚಾಲಕರು ನಂತರ ಸಾರ್ವಜನಿಕರ ಕಾಳಜಿ ಮತ್ತು ಸಹಕಾರವನ್ನು ಮೆಚ್ಚಿ ಧನ್ಯವಾದ ಅರ್ಪಿಸಿದರು.
ಸುರಕ್ಷಿತವಾಗಿ ಬಸ್ ಕಲ್ಲುಗುಡ್ಡೆಯತ್ತ ಪ್ರಯಾಣ ಮುಂದುವರಿಸಿತು. ಘಟನೆ ಸಾರ್ವಜನಿಕ ಜಾಗೃತಿ ಮತ್ತು ಹೊಣೆಗಾರಿಕೆಗೆ ಉತ್ತಮ ಉದಾಹರಣೆಯಾಗಿ ಪರಿಣಮಿಸಿದೆ.

