ಕಡಬ: ಕಡಬ ತಾಲೂಕಿನ ಅಲಂಕಾರು ಗ್ರಾಮದ ನಾಡ್ತಿಲ ಬೇಬಿಕಲ್ಲು ಪ್ರದೇಶದಲ್ಲಿ ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆಯ ಮೇಲೆ ಕಡಬ ಪೊಲೀಸರು ಬುಧವಾರ ಸಂಜೆ ಮಿಂಚಿನ ದಾಳಿ ನಡೆಸಿ ಬೋಟ್ ಸೇರಿದಂತೆ ಹಲವಾರು ಪರಿಕರಗಳನ್ನು ಜಪ್ತಿ ಮಾಡಿದ್ದಾರೆ.

ಫೆಬ್ರವರಿ 18ರಂದು ಮಧ್ಯಾಹ್ನ ಸುಮಾರು 3:30ರ ವೇಳೆಗೆ ಅಲಂಕಾರು ಗ್ರಾಮದ ಮಾಡ್ತಿಲ ಪ್ರದೇಶದಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಕಡಬ ಪೊಲೀಸ್ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಅವರಿಗೆ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಅಡ್ಡೆ ಮೇಲೆ ದಾಳಿ ನಡೆಸಿದರು.
ಪೊಲೀಸರ ಆಗಮನದ ಸುಳಿವು ತಿಳಿದು ಮರಳು ದಂಧೆಯಲ್ಲಿ ತೊಡಗಿದ್ದ ಅಪರಿಚಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ದೊಡ್ಡ ಪ್ರಮಾಣದ ಮರಳು ಮತ್ತು ಅದನ್ನು ತೆಗೆಯಲು ಬಳಸುತ್ತಿದ್ದ ಸಲಕರಣೆಗಳು ಪತ್ತೆಯಾಗಿವೆ.

ಪೊಲೀಸರು ಒಟ್ಟು 1.5 ಲಾರಿ ಲೋಡ್ ಹಸಿ ಮರಳು (ಅಂದಾಜು ಮೌಲ್ಯ ₹15,000), ಮರಳು ಸಾಗಾಟಕ್ಕೆ ಬಳಸುತ್ತಿದ್ದ ಕಬ್ಬಿಣದ ಬೋಟ್ (ಅಂದಾಜು ₹10,000), ಕಬ್ಬಿಣದ ಮೆಟ್ಟಿಲುಗಳು, ಪ್ಲಾಸ್ಟಿಕ್ ಬುಟ್ಟಿಗಳು, ಹಗ್ಗ ಸೇರಿದಂತೆ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 18/2026 ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಕರ್ನಾಟಕ ಮೈನರ್ ಮಿನರಲ್ ಕಾನ್ಸೆಷನ್ ರೂಲ್ಸ್ (1994), ಎಂಎಂಡಿಆರ್ ಕಾಯ್ದೆ 1957 ಹಾಗೂ ಬಿ ಎನ್ ಎಸ್ – 2023ರ ಸೆಕ್ಷನ್ 303(2) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪಿ.ಎಸ್‌.ಐ ಜಂಬುರಾಜ್ ಮಹಾಜನ್ ಅವರೊಂದಿಗೆ ಸಿಬ್ಬಂದಿಗಳಾದ ಸಿದ್ದಪ್ಪ ಹೂಗಾರ, ವಿಠಲ್ ಎಂ.ಜಿ ಹಾಗೂ ಮಹೇಶ್ ಸಹಕರಿಸಿದರು

Leave a Reply

Your email address will not be published. Required fields are marked *