ರಾಮಕುಂಜ: ಕಡಬ ತಾಲೂಕಿನ ಕೊಯ್ಲದಲ್ಲಿರುವ ಪಶುಸಂಗೋಪನ ಇಲಾಖೆಯ ಕೆ.ಸಿ. ಫಾರ್ಮ್ ವ್ಯಾಪ್ತಿಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದಾಗಿ ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿದ್ದ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದೆ.



ಮಧ್ಯಾಹ್ನ ವೇಳೆಗೆ ಕಾಣಿಸಿಕೊಂಡ ಬೆಂಕಿ ಕೊಯ್ಲದಿಂದ ಗಂಡಿಬಾಗಿಲು ಹಾಗೂ ಆನೆಗುಂಡಿ ಭಾಗದಲ್ಲಿರುವ ಪಶುಸಂಗೋಪನ ಇಲಾಖೆಯ ಕಚೇರಿಯ ಹಿಂಭಾಗದ ಹುಲ್ಲುಗಾವಲಿಗೆ ವ್ಯಾಪಿಸಿದೆ. ಸುಮಾರು 100 ಎಕರೆ ಪ್ರದೇಶದಲ್ಲಿದ್ದ ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅಲ್ಲಿದ್ದ ಮರಗಿಡಗಳಿಗೂ ಹಾನಿಯಾಗಿದೆ. ಈ ಘಟನೆದಿಂದ ಇಲಾಖೆಗೆ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.


ಘಟನೆಯ ಬಳಿಕ ಪಶುಸಂಗೋಪನ ಇಲಾಖೆಯ ಸಿಬ್ಬಂದಿಗಳು ತಕ್ಷಣ ಕ್ರಮ ಕೈಗೊಂಡು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಹೆಚ್ಚಿನ ಅನಾಹುತವನ್ನು ತಪ್ಪಿಸಲು ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.


ಪ್ರತಿ ವರ್ಷವೂ ಬೇಸಿಗೆ ವೇಳೆಯಲ್ಲಿ ಒಣಗಿರುವ ಹುಲ್ಲುಗಾವಲುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುತ್ತಿರುವ ಸಾಧ್ಯತೆ ಇದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಬರುತ್ತಿವೆ. ಈ ಕುರಿತು ಸಂಬಂಧಪಟ್ಟ ಇಲಾಖೆ ತನಿಖೆ ನಡೆಸುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


