ಕಡಬ : ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಭಟದ ನಡುವೆ ಸೀಮಿತ ಸೌಲಭ್ಯಗಳಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಈ ಬಾರಿ ಕಾಲೇಜು ಶೇ. 99.39 ಫಲಿತಾಂಶ ದಾಖಲಿಸಿ ಜಿಲ್ಲೆಯ ಇತರ ಸರ್ಕಾರಿ ಕಾಲೇಜುಗಳಿಗೆ ದಾರಿದೀಪವಾಗಿ ಪರಿಣಮಿಸಿದೆ.




ಗ್ರಾಮೀಣ ಭಾಗದ ಸರ್ಕಾರಿ ಕಾಲೇಜು ಎಂದಾಗ ಸಾಮಾನ್ಯವಾಗಿ ಮೂಲಭೂತ ಸೌಕರ್ಯಗಳ ಕೊರತೆ ನೆನಪಾಗುತ್ತದೆ. ಆದರೆ ಕಡಬದ ಈ ಕಾಲೇಜಿನಲ್ಲಿ ಸೌಲಭ್ಯಗಳಿಗಿಂತ ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಉಪನ್ಯಾಸಕರ ಬದ್ಧತೆ ಮೇಲುಗೈ ಸಾಧಿಸಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಬಡತನ ಹಾಗೂ ಗ್ರಾಮೀಣ ಹಿನ್ನಲೆಯ ವಿದ್ಯಾರ್ಥಿಗಳೇ ಹೆಚ್ಚಿರುವ ಈ ಕಾಲೇಜಿನಲ್ಲಿ ಒಟ್ಟು 109 ವಿದ್ಯಾರ್ಥಿಗಳಲ್ಲಿ 108 ಮಂದಿ ಉತ್ತೀರ್ಣರಾಗಿರುವುದು ವಿಶೇಷ ಸಾಧನೆ. ಇವರಲ್ಲಿ 26 ಮಂದಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದು, 70 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ವಿಭಾಗವಾರು ಫಲಿತಾಂಶದಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗಗಳು ಶೇ.100 ಫಲಿತಾಂಶ ದಾಖಲಿಸಿದರೆ, ವಾಣಿಜ್ಯ ವಿಭಾಗವು ಶೇ.98.18 ಫಲಿತಾಂಶ ಪಡೆದಿದೆ.
ಸೀಮಿತ ಸೌಲಭ್ಯಗಳ ನಡುವೆಯೂ ವಿದ್ಯಾರ್ಥಿಗಳ ಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಸಾಧ್ಯವಾದ ಈ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಿದೆ.




