ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಳದ ಹೆಸರನ್ನು ಉಲ್ಲೇಖಿಸಿ ಷಡ್ಯಂತ್ರ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.

ಇಂದು ಸಮಿತಿಯ ಸದಸ್ಯರು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಪುತ್ತೂರು ಮಹಾಲಿಂಗೇಶ್ವರ ದೇವರು ವಿಶ್ವದಾದ್ಯಂತ ಭಕ್ತರನ್ನು ಹೊಂದಿರುವ ದೈವವಾಗಿದ್ದು, ಎರಡು ಕುಟುಂಬಗಳ ಮಧ್ಯೆ ನಡೆಯುತ್ತಿರುವ ವಿವಾದ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಪಿ.ಜಿ. ಜಗನ್ನಿವಾಸ ರಾವ್ ಹಾಗೂ ಸಂತ್ರಸ್ತೆಯ ಕುಟುಂಬದ ಕಲಹವನ್ನು ದೇವಾಲಯದ ಧ್ವಜಸ್ತಂಭದವರೆಗೂ ತರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ದೇವಾಲಯದ ಧ್ವಜಸ್ತಂಭದ ಮುಂದೆ ಪ್ರತಿಭಟನೆ ನಡೆಸುವುದು ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುತ್ತದೆ. ದೇವಾಲಯವು ಆರಾಧನಾ ಕೇಂದ್ರವಾಗಿದ್ದು, ಹಕ್ಕೊತ್ತಾಯ ಮಾಡುವ ಸ್ಥಳವಲ್ಲ. ಪ್ರತಿಭಟನೆಗೆ ಪ್ರತ್ಯೇಕ ಸ್ಥಳಗಳಿದ್ದು, ಧಾರ್ಮಿಕ ಸ್ಥಳಗಳನ್ನು ಇದರಲ್ಲಿ ಒಳಪಡಿಸಬಾರದು ಎಂದು ಸಮಿತಿ ಮನವಿಯಲ್ಲಿ ಉಲ್ಲೇಖಿಸಿದೆ.
ಇದಲ್ಲದೆ, ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಧ್ವಜಸ್ತಂಭದ ಬಳಿ ಯಾವುದೇ ಪ್ರತಿಭಟನೆ ಅಥವಾ ಧರಣಿಗೆ ಅವಕಾಶ ನೀಡುವುದಿಲ್ಲ ಎಂದು ಸಮಿತಿ ಸದಸ್ಯರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಪ್ರಭಾವಿ ವ್ಯಕ್ತಿಗಳಾದರೂ ಸಹ ಅಂತಹ ಕ್ರಮ ಕೈಗೊಳ್ಳಲು ಪ್ರಯತ್ನಿಸಿದರೆ ಅವರನ್ನು ಅಲ್ಲಿಂದಲೇ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಎರಡು ಕುಟುಂಬಗಳ ವೈಯಕ್ತಿಕ ಕಲಹವನ್ನು ದೇವಾಲಯದ ವ್ಯಾಪ್ತಿಗೆ ತರುವುದು ಸೂಕ್ತವಲ್ಲ. ಜಾತ್ರೋತ್ಸವದ ಸಂದರ್ಭದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಮುಂಜಾಗ್ರತಾ ಕ್ರಮವಾಗಿ ಅಂತಹವರನ್ನು ದೇವಾಲಯದ ಒಳ ಪ್ರವೇಶಕ್ಕೂ ಅವಕಾಶ ನೀಡಬಾರದು ಎಂದು ಸಮಿತಿ ಆಗ್ರಹಿಸಿದೆ.

Leave a Reply

Your email address will not be published. Required fields are marked *