ಕಡಬ: ರೈತರು ಕಷ್ಟಪಟ್ಟು ಬೆಳೆಸಿದ ಅಡಿಕೆಯನ್ನು ರಾತ್ರೋರಾತ್ರಿ ಕಳವು ಮಾಡುತ್ತಿದ್ದ ಕಳ್ಳನನ್ನು ರೈತರೇ ವಿಭಿನ್ನ ರೀತಿಯಲ್ಲಿ ಹಿಡಿದು ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಕಡಬ ತಾಲೂಕಿನ ಪೆರಾಬೆ ಗ್ರಾಮದ ಅಗತ್ತಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಅಗತ್ತಾಡಿ ನಿವಾಸಿಗಳಾದ ಕೃಷ್ಣಕುಮಾರ್ ಭಟ್ ಮತ್ತು ಮೋನಪ್ಪ ಗೌಡ ಅವರ ತೋಟದಲ್ಲಿ ಕಳೆದ ಒಂದು ತಿಂಗಳಿನಿಂದ ಅಡಿಕೆ ಕಳ್ಳತನ ನಡೆಯುತ್ತಿತ್ತು. ಹಗಲು-ರಾತ್ರಿ ತೋಟಕ್ಕೆ ನುಗ್ಗಿ ಫಸಲನ್ನು ಕಳವು ಮಾಡುತ್ತಿದ್ದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದರು.

ಕಳ್ಳರನ್ನು ಹಿಡಿಯಲೇಬೇಕು ಎಂಬ ದೃಢಸಂಕಲ್ಪದೊಂದಿಗೆ ಕೃಷ್ಣಕುಮಾರ್ ಭಟ್ ಅವರು ಕೂಲಿ ಕಾರ್ಮಿಕರ ವಿಶೇಷ ತಂಡವನ್ನು ರಚಿಸಿ ಕಾವಲು ವ್ಯವಸ್ಥೆ ಮಾಡಿದರು. ಫೆಬ್ರವರಿ 18ರಂದು ಮಧ್ಯಾಹ್ನ ತೋಟಕ್ಕೆ ಅಡಿಕೆ ಕದಿಯಲು ಬಂದ ವ್ಯಕ್ತಿಯನ್ನು ತಂಡದ ಸದಸ್ಯರು ಸುತ್ತುವರಿದು ರೆಡ್ ಹ್ಯಾಂಡ್‌ನಲ್ಲಿ ಹಿಡಿದರು.

ವಿಚಾರಣೆ ನಡೆಸಿದಾಗ ಆರೋಪಿ ಸ್ಥಳೀಯ ನಿವಾಸಿಯೇ ಎಂಬುದು ತಿಳಿದುಬಂದಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಪೊಲೀಸರಿಗೆ ದೂರು ನೀಡುವುದು ರೂಢಿಯಾಗಿದ್ದರೂ, ಕೃಷಿಕ ಕೃಷ್ಣಕುಮಾರ್ ಭಟ್ ಅವರು ಮಾನವೀಯ ನೆಲೆಯಲ್ಲಿ ಕಳ್ಳನಿಗೆ ಬುದ್ಧಿ ಹೇಳಿ, ಇನ್ನು ಮುಂದೆ ಇಂತಹ ಕೃತ್ಯ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ರೈತರ ಈ ಕ್ರಮ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಳ್ಳತನ ತಡೆಗೆ ಜಾಗೃತಿಯ ಅಗತ್ಯವಿದೆ ಎಂಬ ಸಂದೇಶವನ್ನು ನೀಡಿದೆ.

Leave a Reply

Your email address will not be published. Required fields are marked *