ಕಡಬ: 10 ಸೆನ್ಸ್ ಜಮೀನು ಕನ್ವರ್ಶನ್ ಪತ್ರಿಕೆಗೆ ಸಹಿ ಮಾಡುವ ವಿಚಾರದಲ್ಲಿ ಲಂಚ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಕಂದಾಯ ನಿರೀಕ್ಷಕ ಪೃಥ್ವಿ ವಿರುದ್ಧ ಕೆಆರ್ಎಸ್ ಪಕ್ಷದ ವತಿಯಿಂದ ಕಡಬ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಆರ್ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್ ಅವರು, ಫೆಬ್ರವರಿ 4ರಂದು 10 ಕನ್ವರ್ಶನ್ ಪತ್ರಿಕೆಗಳಿಗೆ ಸಹಿ ಮಾಡಲು ಪ್ರತಿ ಸೆನ್ಸ್ಗೆ ₹100ರಂತೆ ಲಂಚ ಬೇಡಿಕೆ ಇಟ್ಟಿದ್ದು, ಮರುದಿನ ಬೆಳಗ್ಗೆ ಸುಮಾರು 12 ಗಂಟೆಗೆ ₹1000 ಲಂಚ ಪಡೆದುಕೊಂಡ ಬಳಿಕವೇ ಸಹಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಹಣ ಸ್ವೀಕರಿಸುವ ದೃಶ್ಯವನ್ನು ವಿಡಿಯೋ ಮಾಡಿರುವುದಾಗಿ ಅವರು ತಿಳಿಸಿದರು.





ಆರೋಪಕ್ಕೆ ಒಳಗಾಗಿರುವ ಕಂದಾಯ ನಿರೀಕ್ಷಕರನ್ನು ಕೂಡಲೇ ಅಮಾನತುಗೊಳಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಕೇವಲ ಎಚ್ಚರಿಕೆ ನೀಡಿ ಸಾದಾ ಅಮಾನತು ಮಾಡುವುದರಿಂದ ಸಮಸ್ಯೆಗೆ ಪರಿಹಾರವಾಗುವುದಿಲ್ಲ. ಸೂಕ್ತ ತನಿಖೆ ನಡೆಸಿ ಕಾನೂನು ಪ್ರಕಾರ ಶಿಕ್ಷೆ ವಿಧಿಸಿದರೆ ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ಸಮರ್ಪಕ ಸೇವೆ ದೊರೆಯಲಿದೆ ಎಂದು ಹೇಳಿದರು.
ಪ್ರತಿಭಟನೆಯ ಬಳಿಕ ಕೆಆರ್ಎಸ್ ಪಕ್ಷದ ಮುಖಂಡರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷ ವಿನ್ನಿ ಪಿಂಟು, ಜಿಲ್ಲಾ ಕಾರ್ಯದರ್ಶಿ ಶಿವರಾಜು, ಕಡಬ ತಾಲೂಕು ಉಪಾಧ್ಯಕ್ಷ ಗಣೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ರೋಷನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



