ಕಡಬ: ಹಕ್ಕುಪತ್ರ ರದ್ದಾದ ಆತಂಕದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಪತ್ನಿಯೊಂದಿಗೆ ತಾಳೂಕು ಕಚೇರಿ ಎದುರು ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ಕಡಬದಲ್ಲಿ ನಡೆದಿದೆ.




ಕಡಬ ತಾಲೂಕಿನ ಪಣೆ ಮಜಲು ನಿವಾಸಿ ನಾಗೇಶ್ ಅವರು ಬಿಳಿನಿಲೆಯಲ್ಲಿ ವಾಸ್ತವ್ಯವಿದ್ದು, ವಾಹನ ಚಾಲಕರಾಗಿ ಜೀವನ ನಡೆಸುತ್ತಿದ್ದರು. ಆದರೆ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಅವರು ದೈಹಿಕವಾಗಿ ಜರ್ಜರಿತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲೇ ಇದೀಗ ಅವರ ಕುಟುಂಬಕ್ಕೆ ಗೃಹಭದ್ರತೆಯ ಆತಂಕ ಕಾಡುತ್ತಿದೆ.


ಸುಮಾರು ಹತ್ತು ವರ್ಷಗಳ ಹಿಂದೆ ಸರ್ಕಾರದ 94ಸಿ ಯೋಜನೆ ಅಡಿಯಲ್ಲಿ ನಾಗೇಶ್ ದಂಪತಿಗೆ ಹಕ್ಕುಪತ್ರ ಮಂಜೂರಾಗಿತ್ತು. ಆ ಪುಟ್ಟ ಕಾಗದದ ತುಣುಕು ಅವರಿಗೊಂದು ಆಸ್ತಿಯಷ್ಟೇ ಅಲ್ಲ, ಬದುಕಿನ ಭರವಸೆಯೂ ಆಗಿತ್ತು. ಸ್ವಂತ ನೆಲೆ ಹೊಂದಿದ್ದೇವೆ ಎಂಬ ನಂಬಿಕೆಯಲ್ಲಿ ಬದುಕು ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಇತ್ತೀಚಿನ ಬೆಳವಣಿಗೆಗಳು ಬರಸಿಡಿಲಿನಂತೆ ಎರಗಿವೆ.
ಕಡಬದಲ್ಲಿ ನ್ಯಾಯಾಲಯ ಸ್ಥಾಪನೆಯಾಗುತ್ತಿರುವ ಹಿನ್ನೆಲೆ, ಇವರಿಗೆ ನೀಡಲಾಗಿದ್ದ ಹಕ್ಕುಪತ್ರವನ್ನು ರದ್ದುಪಡಿಸಲಾಗಿದೆ ಎಂಬ ಮಾಹಿತಿ ಇತ್ತೀಚೆಗೆ ಮಾತ್ರ ಇವರಿಗೆ ತಿಳಿದುಬಂದಿದೆ. ಫೆಬ್ರವರಿ 20ರಂದು ಹಳೆಯ ಮನೆಯನ್ನು ದುರಸ್ತಿ ಮಾಡಲು ನಾಗೇಶ್ ಮುಂದಾದಾಗ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಇದರಿಂದ ಕುಟುಂಬ ಆತಂಕಕ್ಕೊಳಗಾಗಿದೆ.


“ದಶಕಗಳಿಂದ ನಂಬಿಕೊಂಡ ನಮ್ಮ ಗೂಡನ್ನು ಕಿತ್ತುಕೊಂಡರೆ ನಾವು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇಲ್ಲ” ಎಂದು ನಾಗೇಶ್ ಕಣ್ಣೀರಿನೊಂದಿಗೆ ಎಚ್ಚರಿಕೆ ನೀಡಿದ್ದು, ಅಲ್ಲಿದ್ದವರ ಮನಸ್ಸು ಕಲುಕುವಂತಾಯಿತು.
ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಿಗುವ ಹಕ್ಕುಪತ್ರಗಳು ಭೂಹೀನರಿಗೆ ಘನತೆಯ ಬದುಕು ನೀಡುತ್ತವೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಇಂತಹ ಸೌಲಭ್ಯಗಳನ್ನು ಹಿಂಪಡೆಯುವ ಕ್ರಮ ಬಡವರ ಬದುಕಿಗೆ ಆಘಾತ ಉಂಟುಮಾಡುತ್ತದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ತಹಸೀಲ್ದಾರ್ ತಕ್ಷಣ ಸ್ಥಳಕ್ಕೆ ಆಗಮಿಸಿ ದಂಪತಿಯನ್ನು ಸಮಾಧಾನಪಡಿಸಿ ದಾಖಲೆಗಳನ್ನು ಪರಿಶೀಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.
ಸರ್ಕಾರದ ಯೋಜನೆಗಳು ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗದೆ, ನಾಗೇಶ್ ಅವರಂತಹ ಕಟ್ಟಕಡೆಯ ವ್ಯಕ್ತಿಗಳ ಬದುಕಿಗೆ ಬೆಳಕು ನೀಡಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ

