
ಪುತ್ತೂರು: ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದಿವ್ಯ ಆಭರಣಗಳಾದ ತಿರುವಾಭರಣಗಳನ್ನು ಸಂರಕ್ಷಿಸುವ ಕೇರಳದ ಪಂದಳ ರಾಜ ಮನೆತನದ ಮಹಾರಾಜ ಪುಣರ್ತಂ ನಾರಾಯಣ ವರ್ಮ ಅವರಿಗೆ ಹನುಮಗಿರಿಯ ಬ್ರಹ್ಮಕಲಶೋತ್ಸವದ ಆಹ್ವಾನ ನೀಡಲಾಗಿದೆ.
ಕೇರಳದ ಪಂದಳ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲತಾಂಬೂಲ, ಶಾಲು ಅರ್ಪಿಸಿ ಹಾಗೂ ಆಮಂತ್ರಣ ಪತ್ರ ನೀಡುವ ಮೂಲಕ ಕ್ಷೇತ್ರದ ಬ್ರಹ್ಮಕಲಶ ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ ಹಾಗೂ ಸುಬ್ಬಪ್ಪ ಪಾಟಾಳಿ ಪಟ್ಟೆ ಅವರು ಮಹಾರಾಜರನ್ನು ಅಧಿಕೃತವಾಗಿ ಆಹ್ವಾನಿಸಿದರು.
ಪ್ರತಿ ವರ್ಷ ಮಕರವಿಳಕ್ಕು ಉತ್ಸವಕ್ಕೂ ಮೂರು ದಿನಗಳ ಮುನ್ನ ಅಯ್ಯಪ್ಪನ ತಿರುವಾಭರಣಗಳನ್ನು ಪಂದಳದಿಂದ ಮೆರವಣಿಗೆಯಲ್ಲಿ ಶಬರಿಮಲೆಗೆ ಕೊಂಡೊಯ್ಯುವ ಪರಂಪರೆ ಇದೆ. ಇಂತಹ ಪವಿತ್ರ ಕ್ಷೇತ್ರದ ಮಹಾರಾಜರು ಇದೇ ಮೊದಲ ಬಾರಿಗೆ ಹನುಮಗಿರಿಗೆ ಆಗಮಿಸಲಿರುವುದು ವಿಶೇಷವಾಗಿದ್ದು ಭಕ್ತರಲ್ಲಿ ಸಂತಸ ಮೂಡಿಸಿದೆ.
ಏಪ್ರಿಲ್ 12ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮಹಾರಾಜರು ಆಗಮಿಸಿ ಶ್ರೀ ಕ್ಷೇತ್ರದ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯರ ದರ್ಶನ ಪಡೆದು ಭಕ್ತರನ್ನು ಹರಸಲಿದ್ದಾರೆ.
ಪಂದಳ ಮಹಾರಾಜ ಪುಣರ್ತಂ ನಾರಾಯಣ ವರ್ಮ ಅವರು ಕೇರಳ ರಾಜ್ಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯಾಧ್ಯಕ್ಷರಾಗಿದ್ದು, ಪಂದಳಂ ಅರಮನೆ ಆಡಳಿತ ಮಂಡಳಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಶಬರಿಮಲೆ ದೇವಸ್ಥಾನದ ರಕ್ಷಣೆಗೆ 2018ರಲ್ಲಿ ನಡೆದ ನಾಮಜಪ ಯಾತ್ರೆಯ ಪ್ರಮುಖ ಸಂಘಟಕರಲ್ಲೊಬ್ಬರಾಗಿದ್ದ ಅವರು, ಸನಾತನ ಮೌಲ್ಯಗಳ ಪ್ರಚಾರ ಹಾಗೂ ಹಿಂದೂ ಸಂಸ್ಕೃತಿಯ ಪರಂಪರೆ ಮುಂದಿನ ಪೀಳಿಗೆಗೆ ತಲುಪಿಸಲು ಸದಾ ಶ್ರಮಿಸುತ್ತಿದ್ದಾರೆ.




