ಕಡಬ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಳಾರ ತಿಮರಡ್ಡದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಲತ್ಯಾಜ್ಯ ಘಟಕಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಸ್ವತಃ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳವಾರ ಕಡಬ ಪಟ್ಟಣ ಪಂಚಾಯಿತಿಗೆ ಕಳಾರ ಪರಿಸರ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಹಜ್ ಕಳಾರ, “ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ವಾಸ್ತವ ಸ್ಥಿತಿ ಪರಿಶೀಲಿಸಿದರೆ ಸತ್ಯ ಬಹಿರಂಗವಾಗುತ್ತದೆ” ಎಂದು ಹೇಳಿದರು.

ಕೇಂದ್ರ ಸರ್ಕಾರದ ಎಸ್‌ಟಿಪಿ ಮತ್ತು ಎಫ್‌ಎಸ್‌ಟಿಪಿ ಯೋಜನೆಯಡಿ ತಿಮರಡ್ಡದಲ್ಲಿ ಮಲತ್ಯಾಜ್ಯ ಘಟಕ ಸ್ಥಾಪಿಸಲು ಮುಂದಾಗಿರುವುದನ್ನು ವಿರೋಧಿಸಿದ ಅವರು, “ಈ ಪ್ರದೇಶ ದಟ್ಟ ಜನವಸತಿ ಪ್ರದೇಶವಾಗಿದ್ದು ಸುತ್ತಮುತ್ತ ಮನೆಗಳು, ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ದೈವಸ್ಥಾನ, ನಾಲ್ವರು ಶಂಕರನಾರಾಯಣ ದೇವಸ್ಥಾನ ಹಾಗೂ ಕೆರೆ ಇದೆ. ಇಲ್ಲಿ ಘಟಕ ಸ್ಥಾಪನೆಯಾದರೆ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರಕ್ಕೆ ಗಂಭೀರ ಹಾನಿಯಾಗಲಿದೆ” ಎಂದು ಆರೋಪಿಸಿದರು. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದರೂ ಬಲವಂತವಾಗಿ ಯೋಜನೆ ಜಾರಿಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್, “ತಿಮರಡ್ಡದಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ಜನರಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿ ನಿರ್ಣಯ ಕೈಗೊಂಡು ಕಂದಾಯ ಇಲಾಖೆಗೆ ಕಳುಹಿಸಲಾಗಿದೆ. ಮತ್ತೆ ಆಡಳಿತ ಮಂಡಳಿ ಸಭೆ ಕರೆದು ಮುಂದಿನ ನಿರ್ಣಯ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಮಾತನಾಡಿ, “ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಜಿಲ್ಲೆಯ ಹಲವು ಪಂಚಾಯಿತಿಗಳಲ್ಲಿ ಈಗಾಗಲೇ ಅನುಷ್ಠಾನಗೊಳ್ಳುತ್ತಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಯ ನಡೆಯುತ್ತಿದೆ. ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು” ಎಂದರು.
ಇದಾದ ಬಳಿಕ ಹೋರಾಟಗಾರರು ಕಡಬ ತಹಶೀಲ್ದಾರರಿಗೂ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಳಾರ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಡ್ಡಾಡಿ, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೆರ ಪೆಳತೋಡಿ, ಹೋರಾಟ ಸಮಿತಿಯ ಉಪಾಧ್ಯಕ್ಷ ರಾಮ್ಲಾ, ಕಾರ್ಯದರ್ಶಿ ಫಾರೂಕೆ, ಕೋಶಾಧಿಕಾರಿ ಗಣೇಶ್ ಪೆಳತೋಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ, ಲಕ್ಷ್ಮೀಶ ಬಂಗೇರ, ಅದಂ ಕುಂಡೋಳಿ, ಜಟಪ್ಪ ಶೆಟ್ಟಿ, ನಾರಾಯಣ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುಕೇಶ್ ಕಡಬ, ರಾಮಚಂದ್ರ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *