ಪುತ್ತೂರು: ಶಬರಿಮಲೆ ಅಯ್ಯಪ್ಪ ಸ್ವಾಮಿಯ ದಿವ್ಯ ಆಭರಣಗಳಾದ ತಿರುವಾಭರಣವನ್ನು ಸಂರಕ್ಷಿಸುತ್ತಿರುವ ಕೇರಳದ ಪಂದಳ ರಾಜ ಮನೆತನದ ಮಹಾರಾಜಾ ಪುಣರ್ತಂ ನಾರಾಯಣ ವರ್ಮ ಅವರು ಮೊದಲ ಬಾರಿಗೆ ಹನುಮಗಿರಿಗೆ ಆಗಮಿಸಲಿದ್ದಾರೆ.
ಏಪ್ರಿಲ್ 12ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅವರು ಹನುಮಗಿರಿಗೆ ಭೇಟಿ ನೀಡಿ, ಶ್ರೀ ಕ್ಷೇತ್ರದ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ಬಳಿಕ ಹನುಮಗಿರಿಯ ಭಕ್ತರನ್ನು ಆಶೀರ್ವದಿಸಲಿದ್ದಾರೆ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.




ಪಂದಳ ಮಹಾರಾಜ ಪುಣರ್ತಂ ನಾರಾಯಣ ವರ್ಮ ಅವರು ಕೇರಳ ರಾಜ್ಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಂದಳಂ ಅರಮನೆ ಆಡಳಿತ ಮಂಡಳಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವುದು ವಿಶೇಷವಾಗಿದೆ.
ಈ ಹಿನ್ನೆಲೆಯಲ್ಲಿ ಬ್ರಹ್ಮಕಲಶೋತ್ಸವಕ್ಕೆ ಭಕ್ತರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ವ್ಯಕ್ತವಾಗಿದೆ.

