ಪುತ್ತೂರು: ವೈದ್ಯರ ಸಲಹೆಯಿಲ್ಲದೆ ಪೈನ್ ಕಿಲ್ಲರ್ ಔಷಧಿಗಳನ್ನು ಅತಿಯಾಗಿ ಬಳಸುವುದರಿಂದ ಕಿಡ್ನಿ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆ ಯುವಜನತೆಗೆ ಅರಿವು ಮೂಡಿಸುವ ಉದ್ದೇಶದಿಂದ ‘ಪೈನ್ ಕಿಲ್ಲರ್ ತ್ಯಜಿಸಿ.. ಕಿಡ್ನಿ ರಕ್ಷಿಸಿ, ಜೀವ ಉಳಿಸಿ’ ಎಂಬ ಜಾಗೃತಿ ಜಾಥಾವನ್ನು ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ದರ್ಬೆ ವೃತ್ತದಲ್ಲಿ ಜಾಥಾಕ್ಕೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, “ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹ ಜಾಗೃತಿ ಜಾಥಾವನ್ನು ಪುತ್ತೂರಿನಲ್ಲಿ ಆರಂಭಿಸಲಾಗಿದೆ. ಈ ಹೋರಾಟ ನಿರಂತರವಾಗಿದ್ದು, ಪ್ರತಿ ಆರು ತಿಂಗಳಿಗೊಮ್ಮೆ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತದೆ” ಎಂದು ಹೇಳಿದರು.



“ಪುತ್ತೂರಿನಲ್ಲಿ ಕಳೆದ ಮೂರು ತಿಂಗಳ ಹಿಂದೆ 180 ಮಂದಿ ಬಡ ವರ್ಗದ ಜನರು ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್‌ಗೆ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದರು. ಈಗ ಈ ಸಂಖ್ಯೆ 208ಕ್ಕೆ ಏರಿಕೆಯಾಗಿದೆ. ಬಹುತೇಕ ಪ್ರಕರಣಗಳಿಗೆ ಪೈನ್ ಕಿಲ್ಲರ್‌ಗಳ ಅತಿಯಾದ ಬಳಕೆ ಕಾರಣವಾಗಿದೆ. ಇವು ಸುಲಭವಾಗಿ ಲಭ್ಯವಾಗುತ್ತಿರುವುದು ಜನರ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವೈದ್ಯರ ಅನುಮತಿ ಇಲ್ಲದೆ ಯಾರೂ ಔಷಧಿಗಳನ್ನು ಬಳಸಬಾರದು” ಎಂದು ಅವರು ಎಚ್ಚರಿಸಿದರು.
ದರ್ಬೆ ವೃತ್ತದಿಂದ ಪ್ರಾರಂಭವಾದ ಜಾಥಾ ಪುತ್ತೂರಿನ ಮುಖ್ಯರಸ್ತೆ ಮೂಲಕ ಬೊಳುವಾರು ತನಕ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್, ಡಾ. ಹೇಮಲತಾ, ಡಾ. ದೀಪಿಕಾ, ಡಾ. ರಾಧಿಕಾ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಮಹಿಳಾ ಕಾಂಗ್ರೆಸ್ ನಾಯಕಿ ಚಂದ್ರಪ್ರಭಾ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಸೇರಿದಂತೆ ಹಲವರು ಭಾಗವಹಿಸಿದ್ದರು.








