ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪುತ್ತೂರು ತಾಲೂಕು ವತಿಯಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಭೆಯನ್ನು ಪುತ್ತೂರು ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು.






ಸಭೆಯ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ಪುತ್ತೂರು ತಾಲೂಕಿನ ಅಧ್ಯಕ್ಷರಾದ ಲೋಕೇಶ್ ಹೆಗ್ಡೆ ವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಜನಜಾಗೃತಿ ಮೂಲಕ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳು ಶ್ಲಾಘನೀಯವಾಗಿದ್ದು, ನಮ್ಮ ವ್ಯಾಪ್ತಿಯಲ್ಲಿ ನಡೆದ ಕಾರ್ಯಗಳು ರಾಜ್ಯಕ್ಕೆ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದೆಯೂ ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮಗಳು ಇನ್ನಷ್ಟು ಪರಿಣಾಮಕಾರಿಯಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ ನವಜೀವನ ಪೋಷಕರ ಸೇವಾ ಪ್ರತಿನಿಧಿಗಳ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ತಾಲೂಕಿನಲ್ಲಿ ಸಕ್ರಿಯ ಸಮಿತಿಗಳ ಕಾರ್ಯಪದ್ಧತಿ, ಮಧ್ಯವರ್ಜನಾ ಶಿಬಿರಗಳ ಆಯೋಜನೆ ಹಾಗೂ ನೂತನ ಸಮಿತಿಗಳ ಸ್ಥಾಪನೆ ಕುರಿತು ವಿವರಿಸಿದರು.


ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಮಾತನಾಡಿ, ನವಜೀವನ ಸದಸ್ಯರು ಯೋಜನೆಯ ಕಾರ್ಯಕರ್ತರಿಗೆ ಸಂಪೂರ್ಣ ಸಹಕಾರ ನೀಡಬೇಕು. ನವಜೀವನ ಸಮಿತಿಯ ಸಭೆಗಳನ್ನು ನಿಯಮಿತವಾಗಿ ನಡೆಸಿ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಏಪ್ರಿಲ್ ತಿಂಗಳಲ್ಲಿ ನವಜೀವನ ಪೋಷಕರ ಸಭೆ ಕರೆಯಿಸಿ ಅನುಪಾಲನೆ ಮಾಡಬೇಕು. ಜನಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು. ಮುಂದಿನ ಸಭೆಯಲ್ಲಿ ಎಲ್ಲಾ ಪದಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜನಜಾಗೃತಿ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಯೋಜನಾಧಿಕಾರಿಗಳಾದ ಶಶಿಧರ್ ಎಂ., ಪುತ್ತೂರು ತಾಲೂಕಿನ ಒಂಬತ್ತು ವಲಯಗಳ ಜನಜಾಗೃತಿ ವಲಯಾಧ್ಯಕ್ಷರು ಹಾಗೂ ಸದಸ್ಯರು, ಮೇಲ್ವಿಚಾರಕರು, ಕಚೇರಿ ಸಿಬ್ಬಂದಿ ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

