ಪುತ್ತೂರು: ಜಿಲ್ಲಾಧಿಕಾರಿಗಳ ಸೂಚನೆಯಂತೆ ರೈತರಿಂದ ಠೇವಣಿಯಾಗಿ ಸಂಗ್ರಹಿಸಲಾಗಿದ್ದ ಕೋವಿಗಳನ್ನು ಇರಿಸಿರುವ ದಾಸ್ತಾನು ಕೊಠಡಿಗಳನ್ನು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಫೆಬ್ರವರಿ 20ರಂದು ಪೊಲೀಸರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದರು.


ರೈತರಿಂದ ಠೇವಣಿ ಸ್ವೀಕರಿಸಲಾದ ಕೋವಿಗಳನ್ನು ಪುತ್ತೂರಿನ ದೇವಕಿಕೃಪ ಹಾಗೂ ಎಸ್‌ಬಿಬಿ ಟವರ್ಸ್ ಕಟ್ಟಡಗಳ ಕೊಠಡಿಗಳಲ್ಲಿ ಸಂಗ್ರಹಿಸಲಾಗಿತ್ತು. ಉಪವಿಭಾಗಾಧಿಕಾರಿಗಳು ಮೊದಲು ದೇವಕಿಕೃಪ ಕಟ್ಟಡದ ಮೇಲಂತಸ್ತಿನಲ್ಲಿರುವ ಎರಡು ಕೊಠಡಿಗಳನ್ನು ಪರಿಶೀಲಿಸಿದರು. ಬಳಿಕ ಕೆಳಮಹಡಿಯ ಅಂಗಡಿಯೊಳಗಿರುವ ಇನ್ನೊಂದು ಕೊಠಡಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಜೆ ವೇಳೆ ಎಸ್‌ಬಿಬಿ ಟವರ್ಸ್ ಕಟ್ಟಡದಲ್ಲಿರುವ ಮತ್ತೊಂದು ದಾಸ್ತಾನು ಕೊಠಡಿಗೂ ತೆರಳಿ ಪರಿಶೀಲಿಸಿದರು.






ಈ ಸಂದರ್ಭ ತಹಶೀಲ್ದಾರ್ ಎಸ್.ಬಿ. ಕೂಡಲಗಿ, ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯ ಅಧಿಕಾರಿ ಮಂಜುನಾಥ್, ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ಹಾಗೂ ಕಂದಾಯ ಅಧಿಕಾರಿ ದಯಾನಂದ ಉಪಸ್ಥಿತರಿದ್ದರು.
ದೇವಕಿಕೃಪ ಕಟ್ಟಡದ ಮೇಲಂತಸ್ತಿಗೆ ತೆರಳುವ ಬೀಗವನ್ನು ಮೋಹನ್ ಭಟ್ ಅವರ ಪುತ್ರ ಶ್ರೀಧರ್ ಭಟ್ ತೆರೆದರು. ಮೇಲಂತಸ್ತಿನಲ್ಲಿರುವ ಎರಡು ಕೊಠಡಿಗಳ ಬೀಗವನ್ನು ಗೋಪಾಲಕೃಷ್ಣ ಭಟ್ ಅವರ ಪುತ್ರ ವಿವೇಕ್ ಭಟ್ ತೆಗೆದರು. ಪರಿಶೀಲನೆ ಪೂರ್ಣಗೊಂಡ ನಂತರ ಎಲ್ಲಾ ದಾಸ್ತಾನು ಕೊಠಡಿಗಳಿಗೆ ಅಧಿಕಾರಿಗಳಿಂದ ಮುದ್ರೆ ಒತ್ತಲಾಯಿತು.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಂಗ್ರಹಿತ ಕೋವಿಗಳ ಸುರಕ್ಷತೆ ಮತ್ತು ದಾಖಲೆ ಪರಿಶೀಲನೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.



