ಕಡಬ, ಫೆ. 19: ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿದ ಕಡಬ ಪೊಲೀಸರು ವಶಪಡಿಸಿಕೊಂಡಿದ್ದ ಮೂರು ಹುಂಜಗಳನ್ನು ಗುರುವಾರ ಪೊಲೀಸ್ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ಮಾರಾಟ ಮಾಡಿದರು.



ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೋಳಿ ಅಂಕ ಮತ್ತು ಜೂಜಾಟದ ಪ್ರಕರಣ (ಅಪರಾಧ ಕ್ರಮಾಂಕ: 16/2026) ಸಂಬಂಧವಾಗಿ ಪೊಲೀಸರು ಮೂರು ಹುಂಜಗಳನ್ನು ವಶಪಡಿಸಿಕೊಂಡಿದ್ದರು. ನ್ಯಾಯಾಲಯದ ಆದೇಶದಂತೆ ಬೆಳಗ್ಗೆ 10 ಗಂಟೆಗೆ ಠಾಣಾ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.



ಹರಾಜಿನಲ್ಲಿ ಕಡಬ ಹಾಗೂ ಮರ್ಧಾಲ ಭಾಗದ ಮೂವರು ವ್ಯಕ್ತಿಗಳು ಭಾಗವಹಿಸಿದ್ದರು. ಸ್ಪರ್ಧಾತ್ಮಕ ಬಿಡ್ಡಿಂಗ್ ನಂತರ ಮೂರು ಹುಂಜಗಳು ಒಟ್ಟು ₹1,000ಕ್ಕೆ ಹರಾಜಾಗಿವೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಕೋಳಿ ಅಂಕದಲ್ಲಿ ಬಳಸುವ ಅಂಕದ ಹುಂಜಗಳು ಮಾರುಕಟ್ಟೆಯಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುತ್ತವೆ. ಆದರೆ ಈ ಬಾರಿ ಹರಾಜಿನಲ್ಲಿ ದೊರೆತ ಬೆಲೆ ಮತ್ತು ಹುಂಜಗಳ ತಳಿ ಕುರಿತು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಕ್ರಮದಿಂದ ಜೂಜಾಟದ ಅಡ್ಡೆಗಳಿಗೆ ತಕ್ಕ ಎಚ್ಚರಿಕೆ ಸಂದೇಶ ನೀಡಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.



