ಪುತ್ತೂರು: ಬದುಕಿನಲ್ಲಿ ಜಾತಿ ಕಂದಾಚಾರಗಳನ್ನು ದೂರ ಇಡುವ ಅಗತ್ಯತೆಯನ್ನು ಸಮಾಜಕ್ಕೆ ತಿಳಿಸಿಕೊಟ್ಟ ಮಹಾಮೇಧಾವಿ ತತ್ವಜ್ಞಾನಿ ಸರ್ವಜ್ಞ ಅವರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಕಾಲದ ಅವಶ್ಯಕತೆಯಾಗಿದೆ ಎಂದು ಪುತ್ತೂರು ತಹಶೀಲ್ದಾರ್ ಎಸ್.ಬಿ. ಕೂಡಲಗಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕುಲಾಲ ಸೇವಾಸಂಘದ ಆಶ್ರಯದಲ್ಲಿ ಪುತ್ತೂರು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಸಂತ ಕವಿ ಸರ್ವಜ್ಞ ಜಯಂತಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಚಿಂತನೆಗಳನ್ನು ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ನೀಡಿದ್ದಾರೆ. ಸಮಾನತೆ, ನೀತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಅವರ ಸಂದೇಶಗಳು ಇಂದಿಗೂ ಮಾರ್ಗದರ್ಶಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಅವರು, ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಮತ್ತು ಸಮಾಜಕ್ಕೆ ನೀಡಿದ ನೀತಿಬೋಧನೆಯ ಮೂಲಕ ಸರ್ವಜ್ಞರು ಸರ್ವಜನಾಂಗಕ್ಕೂ ಜಾಗೃತಿ ಮೂಡಿಸಿದರು. ಮೇಳು-ಕೀಳು ಜಾತಿ ವೈಷಮ್ಯದಿಂದ ಸಮಾಜ ಅವನತಿಯಾಗುತ್ತದೆ ಎಂಬ ಎಚ್ಚರಿಕೆಯನ್ನು ಅವರು ತಮ್ಮ ವಚನಗಳಲ್ಲಿ ನೀಡಿದ್ದಾರೆ. ಸರ್ವಜ್ಞರ ಪ್ರತಿಯೊಂದು ತ್ರಿಪದಿಯೂ ಹೃದಯಸ್ಪರ್ಶಿಯಾಗಿದ್ದು, ಇಂದಿನ ಯುವಜನತೆ ಅವರ ನಿಜವಾದ ಚಿಂತನೆಗಳನ್ನು ಅರಿತುಕೊಳ್ಳುವಲ್ಲಿ ಹಿಂದೆಬಿದ್ದಿರುವುದು ವಿಷಾದನೀಯ ಎಂದರು.
ಸಂಸ್ಮರಣಾ ಭಾಷಣ ಮಾಡಿದ ಸಂತಫಿಲೋಮಿನಾ ಕಾಲೇಜು ಪ್ರಾಧ್ಯಾಪಕ ಡಾ. ಚಂದ್ರಶೇಖರ್ ಅವರು, ದಾರ್ಶನಿಕರು ಮತ್ತು ರಾಜಾಧಿರಾಜರ ದೇದೀಪ್ಯಮಾನ ಚರಿತ್ರೆಯಿಂದ ಭಾರತ ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಕನ್ನಡದ ಜನಸಾಮಾನ್ಯರ ಆಡುಭಾಷೆಯಲ್ಲಿ ಜಾತಿ ಅನಿಷ್ಟತೆಗಳ ವಿರುದ್ಧ ಸಮರ ಸಾರಿದ ಕವಿ ಸರ್ವಜ್ಞರ ವಚನಗಳು ಸಾರ್ವಕಾಲಿಕ ಸತ್ಯಗಳಾಗಿವೆ. ಆದರೆ ಇಂದಿನ ಸಂದರ್ಭದಲ್ಲಿ ಕನ್ನಡ-ಆಂಗ್ಲ ಭಾಷಾ ಮಾಧ್ಯಮಗಳ ಗೊಂದಲದಲ್ಲಿ ಕನ್ನಡ ಅಕ್ಷರಗಳನ್ನೇ ಸರಿಯಾಗಿ ಬರೆಯಲಾರದ ಪರಿಸ್ಥಿತಿ ಉಂಟಾಗಿದೆ. ಕಾಲ ಕೆಟ್ಟಿಲ್ಲ, ಕಾಲ ಬದಲಾಗಿದೆ; ಈ ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಯುವಜನತೆಗೆ ಈ ಕುರಿತು ಅರಿವು ಮೂಡಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಚಾಲಕ ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಕುಲಾಲ ಸೇವಾಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಂದಾಯ ಇಲಾಖೆಯ ದಯಾನಂದ ಡಿ.ಟಿ., ಉಪತಹಶೀಲ್ದಾರ್ ರವಿ ಕುಮಾರ್, ಶ್ರೀಕಲಾ, ಶಿವಾನಂದ ನಾಟೇಕರ್, ರಮೇಶ್, ಜಯಪ್ರಕಾಶ್, ಸರ್ವೆ ಇಲಾಖೆಯ ಮೋಹನ್, ಪ್ರಮೋದ್, ಆಹಾರ ಇಲಾಖೆಯ ಜಿತೇಶ್, ಸಿಡಿಪಿಒ ಹರೀಶ್ ಕುಮಾರ್, ಉಪತಹಶೀಲ್ದಾರ್ ಸುಲೋಚನಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *