ಪುತ್ತೂರು: ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ನಿರ್ಮಿಸಲಾರ. ಚರಿತ್ರೆಯನ್ನು ಓದದವನು ಚರಿತ್ರೆಯ ಬಗ್ಗೆ ಹೇಳಲು ಅರ್ಹನಲ್ಲ ಎಂದು ಪುತ್ತೂರು ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ ಅಭಿಪ್ರಾಯಪಟ್ಟರು.

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿವೇಕಾನಂದ ಪದವಿ ಕಾಲೇಜು ಘಟಕ ಮತ್ತು ವಿವೇಕಾನಂದ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆದ ಶಿವಾಜಿ ಜೀವನ ಚರಿತ್ರೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಭಾರತದ ಇತಿಹಾಸದಲ್ಲಿ ಅನೇಕ ಯುದ್ಧಗಳು ನಡೆದಿದ್ದರೂ ಅವುಗಳನ್ನು ಚಾಕಚಕ್ಯತೆಯಿಂದ ಎದುರಿಸಿ ಮುನ್ನಡೆದವರು ಶಿವಾಜಿ ಮಹಾರಾಜ. ಶಿವಾಜಿ ಭಾರತಕ್ಕೆ ಮಾತ್ರ ಸೀಮಿತವಲ್ಲದೇ, ವಿಶ್ವಮಟ್ಟದಲ್ಲಿ ಪರಿಚಿತ ವ್ಯಕ್ತಿತ್ವವಾಗಿದ್ದಾರೆ. ಅವರ ಧ್ಯೇಯನಿಷ್ಠೆ, ಆತ್ಮವಿಶ್ವಾಸ ಮತ್ತು ಅಂತರ್‌ಶಕ್ತಿಯನ್ನು ಯುವಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಶ್ರೀ ಕೃಷ್ಣ ಗಣರಾಜ್ ಭಟ್ ಮಾತನಾಡಿ, ಇಂತಹ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳಿಗೆ ಅತ್ಯಂತ ಅಗತ್ಯ. ಸಾಹಸಮಯ ಹಾಗೂ ಪ್ರೇರಣಾದಾಯಕ ಪುಸ್ತಕಗಳನ್ನು ಓದಿ ಅವುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

ವೇದಿಕೆಯಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ಅಧ್ಯಕ್ಷ ಪ್ರಸಾದ್ ಶಾನ್ ಬಾಗ್, ಐಕ್ಯೂಎಸಿ ಘಟಕದ ಸಂಯೋಜಕಿ ಡಾ. ರವಿಕಲಾ, ಕಾಲೇಜಿನ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಣವ್ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತ ಭುವನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *