ಪುತ್ತೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್ ಕೊರತೆ ಮುಂದುವರೆದಿರುವ ಹಿನ್ನಲೆಯಲ್ಲಿ ಗ್ಯಾಸ್ ಅವಲಂಬಿತ ಆಟೋ ರಿಕ್ಷಾ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಹೆಚ್ಚಿದ ದರದ ವಿರುದ್ಧ ಸೋಮವಾರ ಪುತ್ತೂರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮಹಿಳಾ ಪೊಲೀಸ್ ಠಾಣೆ ಸಮೀಪದ ಕಾನ್ಫಿಡೆನ್ಸ್ ಗ್ಯಾಸ್ ಲಿಮಿಟೆಡ್ನ ‘ಗೋ ಗ್ಯಾಸ್’ ಪಂಪ್ನಲ್ಲಿ ಗ್ಯಾಸ್ ದರವನ್ನು ರೂ.120ಕ್ಕೆ ನಿಗದಿ ಮಾಡಲಾಗಿದ್ದರಿಂದ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. ಸಮೀಪದ ಇತರ ಪಂಪ್ಗಳಲ್ಲಿ ಗ್ಯಾಸ್ ರೂ.92ಕ್ಕೆ ಲಭ್ಯವಿದ್ದರೂ, ಇಲ್ಲಿ ಏಕಾಏಕಿ ದರ ಏರಿಕೆ ಮಾಡಿರುವುದು ವಂಚನೆ ಎಂದು ಆರೋಪಿಸಿದರು. ಇದೇ ಪಂಪ್ನಲ್ಲಿ ಮೂರನೇ ಬಾರಿ ದರ ಏರಿಕೆ ಮಾಡಲಾಗಿದೆ ಎಂದು ಚಾಲಕರು ಆರೋಪಿಸಿದರು.


ಸ್ಥಳಕ್ಕೆ ಜಮಾಯಿಸಿದ ಆಟೋ ಚಾಲಕರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿ, “ಇದರಿಂದ ದಿನನಿತ್ಯ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಗ್ಯಾಸ್ ಪಂಪ್ಗಳಲ್ಲಿ ಹಗಲು ದರೋಡೆ ನಡೆಯುತ್ತಿದೆ. ಸರ್ಕಾರದ ಸುತ್ತೋಲೆ ತೋರಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ನಗರ ಠಾಣೆಯ ಸಬ್ಇನ್ಸ್ಪೆಕ್ಟರ್ ಜನಾರ್ದನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಗ್ಯಾಸ್ ಪಂಪ್ ಮಾಲಕರೊಂದಿಗೆ ಮಾತುಕತೆ ನಡೆಸಿದರು. ದರ ಕಡಿಮೆ ಮಾಡಲು ಮಾಲಕರು ಒಪ್ಪದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪಂಪ್ ಅನ್ನು ತಕ್ಷಣ ಬಂದ್ ಮಾಡುವಂತೆ ಪೊಲೀಸರು ಸೂಚಿಸಿದರು. ಬಳಿಕ ಪಂಪ್ ಮುಂದೆ ಹಗ್ಗ ಕಟ್ಟಿ ವಾಹನಗಳ ಸಂಚಾರವನ್ನು ತಡೆಗಟ್ಟಲಾಯಿತು.






ನಿಯಮ ಮೀರಿ ದರ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್ ಪಂಪ್ನ ಲೈಸನ್ಸ್ ರದ್ದುಪಡಿಸಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಸ್ ಪಂಪ್ ಬಂದ್ ಆದ ಬಳಿಕ ಆಟೋ ಚಾಲಕರು ಶಾಸಕರ ಕಚೇರಿಗೆ ತೆರಳಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿ, ಗ್ಯಾಸ್ ಕೊರತೆಯಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು.


ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಆಟೋ ಚಾಲಕ ಮಾಲಕರ ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ ಕುಲಾಲ್, ಸ್ನೇಹಸಂಗಮ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ತಾರನಾಥ ಬನ್ನೂರು, ಇಸ್ಮಾಯಿಲ್ ಬೊಳುವಾರು, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕೆ., ಎಸ್ಡಿಟಿಯು ಸಂಘದ ಅಧ್ಯಕ್ಷ ಆಶೀಫ್ ಮುಕ್ವೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
