ಕಾಣಿಯೂರು, ಫೆ.14: ‘ಪ್ರಕೃತಿಯೊಂದಿಗೆ ನೈಜ ಶಿಕ್ಷಣ’ ಎಂಬ ಧ್ಯೇಯವಾಕ್ಯದೊಂದಿಗೆ ಚಾರ್ವಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ‘ಭೂಮಿ ಏಕೋ ಕ್ಲಬ್’ ಅಡಿಯಲ್ಲಿ ವಿದ್ಯಾರ್ಥಿಗಳು ಕಾಣಿಯೂರಿನ ಪ್ರಗತಿಪರ ಕೃಷಿ ತೋಟಕ್ಕೆ ಭೇಟಿ ನೀಡಿ ಕೃಷಿ ಪಾಠಗಳನ್ನು ಪ್ರಾಯೋಗಿಕವಾಗಿ ಅರಿತುಕೊಂಡರು.




ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಪ್ರಗತಿಪರ ಕೃಷಿಕರಾದ ವಿಶ್ವನಾಥ ಕಂಚನ ಅವರ ಮನೆ ಮತ್ತು ತೋಟಕ್ಕೆ ಭೇಟಿ ನೀಡಿದರು. ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರವಹಿಸುವ ಜೇನುನೊಣಗಳ ಜೀವನಚಕ್ರ, ಅವುಗಳ ಸಹಬಾಳ್ವೆ ಹಾಗೂ ಜೇನು ಕೃಷಿಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಕುತೂಹಲದಿಂದ ಮಾಹಿತಿ ಪಡೆದುಕೊಂಡರು.



ವಿಶ್ವನಾಥ ಕಂಚನ ಅವರು ಜೇನುಪೆಟ್ಟಿಗೆಯ ಜೋಡಣೆ ವಿಧಾನ, ಜೇನುನೊಣಗಳ ಸಂಘಟಿತ ಜೀವನ ಶೈಲಿ, ಜೇನುತುಪ್ಪ ತಯಾರಿಕಾ ಕ್ರಮ ಹಾಗೂ ಅದನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ವಿಧಾನಗಳ ಕುರಿತು ಪ್ರಾಯೋಗಿಕವಾಗಿ ವಿವರಿಸಿದರು. ತೋಟದಲ್ಲೇ ಸಂಗ್ರಹಿಸಿದ ತಾಜಾ ಜೇನುತುಪ್ಪವನ್ನು ಸವಿಯುವ ಅವಕಾಶ ವಿದ್ಯಾರ್ಥಿಗಳಿಗೆ ದೊರೆತಿದ್ದು, ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವಿಶೇಷ ಅನುಭವವಾಗಿ ಪರಿಣಮಿಸಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರು ರಾಮೇಶಿ ಎಸ್., ಎಸ್‌ಡಿಎಂಸಿ ಸದಸ್ಯ ಕುಸುಮಾಧರ ಗೌಡ ಇದ್ಯಡ್ಕ, ಸಹ ಶಿಕ್ಷಕರಾದ ಚೆನ್ನಪ್ಪ ಗೌಡ, ಆಶಾಲತಾ, ನಯನ, ಶೋಭಾ ಮತ್ತು ಶ್ವೇತ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರಕೃತಿ ಸ್ನೇಹಿ ಕೃಷಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ನೈಜ ಅನುಭವದ ಮೂಲಕ ಪರಿಚಯಿಸಿದ ಈ ಕಾರ್ಯಕ್ರಮವು ಶಿಕ್ಷಣದ ಜೊತೆಗೆ ಪರಿಸರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.


