ಪುತ್ತೂರು: ಮಕ್ಕಳ ಸೃಜನಾತ್ಮಕ ಚಟುವಟಿಕೆಗಳು ಹಾಗೂ ಮನೋವಿಕಾಸಕ್ಕೆ ಪೂರಕವಾಗಿರುವ ಬೇಸಿಗೆ ಶಿಬಿರವು ಪುತ್ತೂರಿನ ಕಲ್ಲಾರೆ ಕಾವೇರಿ ಕಾಂಪ್ಲೆಕ್ಸ್‌ನಲ್ಲಿರುವ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ಏಪ್ರಿಲ್ 12ರಿಂದ 19ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.




ಶಿಬಿರದಲ್ಲಿ ವಿವಿಧ ಕಲಾತ್ಮಕ ಚಟುವಟಿಕೆಗಳು, ರಂಗ ಶಿಕ್ಷಣ ಹಾಗೂ ಮಕ್ಕಳ ಮನೋವಿಕಾಸಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅನುಭವಿ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ಪಾಪೆಟ್ ತಯಾರಿ, ಅಬ್ಸ್ಟ್ರಾಕ್ಟ್ ಪ್ರಿಂಟ್ ವಿನ್ಯಾಸ, ಮನೋವಿಕಾಸ ಆಟಗಳು, ರೇಖಾಚಿತ್ರ ವಿನ್ಯಾಸ ಸೇರಿದಂತೆ ಹಲವು ಕಾರ್ಯಾಗಾರಗಳು ನಡೆಯಲಿವೆ.
ಏಷ್ಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧಕಿ ಗೀತಾ ಲಕ್ಷ್ಮೀ ಕೆದಿಮಾರ್ ಅವರು ಕರೋಕೆ ಗಾಯನ, ವೇದಿಕೆಯಲ್ಲಿ ನಿಲ್ಲುವ ಭಂಗಿ, ಭಯವಿಲ್ಲದೆ ಹಾಡುವ ತಂತ್ರಗಳು ಹಾಗೂ ಭಜನೆಗಳ ಮಹತ್ವ ಕುರಿತು ತರಬೇತಿ ನೀಡಲಿದ್ದಾರೆ. ನೀನಾಸಂನ ರಂಗ ಗಣೇಶ್ ಭೀಮನ ಕೋಣೆ ಅವರು ರಂಗ ಶಿಕ್ಷಣ, ರಂಗಗೀತೆಗಳು ಮತ್ತು ರಂಗ ವಿನ್ಯಾಸಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.



