ಪುತ್ತೂರು /ಬೆಂಗಳೂರು,ಮಾರ್ಚ್ 28, ಸಮಾಜಸೇವೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ತಾಲೂಕು ಮಾತ್ರವಲ್ಲದೆ ಜಿಲ್ಲಾಮಟ್ಟದಲ್ಲಿಯೂ ವಿಶಿಷ್ಟ ಗುರುತು ಮೂಡಿಸಿರುವ ಪುತ್ತೂರು ಉಮೇಶ್ ನಾಯಕ್ ಅವರಿಗೆ ಪ್ರತಿಷ್ಠಿತ ಏಷ್ಯಾನೆಟ್ ಸುವರ್ಣ ಟಿವಿ ಹಾಗೂ ಕನ್ನಡಪ್ರಭ ಪ್ರದಾನ ಮಾಡುವ ‘ಸುವರ್ಣ ಕನ್ನಡಿಗ – 2026’ ಪ್ರಶಸ್ತಿ ಮಾರ್ಚ್ 28ರಂದು ಬೆಂಗಳೂರಿನ ಕನ್ರಡ್ ಪಂಚತಾರಾ ಹೋಟೆಲಿನ ಸಭಾಂಗಣದಲ್ಲಿ ಭವ್ಯವಾಗಿ ನಡೆಯಿತು. ಪುತ್ತೂರು ಉಮೇಶ್ ನಾಯಕ್ ಅವರೊಂದಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ವಿದ್ಯಾಶಂಕರ್ ಹಾಗೂ ಕನ್ನಡದಲ್ಲಿ ಐಎಎಸ್ ಬರೆದ ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ. ಸೋಮಶೇಖರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 33 ಸೇವಾ ಸಾಧಕರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ್ ಹೊರಟ್ಟಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಎಚ್.ಕೆ. ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಅನಿರುದ್ಧ, ಏಷ್ಯಾನೆಟ್ ಸುವರ್ಣ ಟಿವಿ ಮತ್ತು ಕನ್ನಡಪ್ರಭ ಸಮೂಹ ಸಂಪಾದಕೀಯ ನಿರ್ದೇಶಕರಾದ ಶ್ರೀ ರವಿ ಹೆಗಡೆ ಹಾಗೂ ದುಬೈಯ ಪ್ರತಿಷ್ಠಿತ ಪರ್ವ ಡೆವಲಪರ್ ಸಂಸ್ಥೆಯ ಪಾಲುದಾರರಾದ ಶ್ರೀ ಶಶಿಧರ್ ನಂಜಪ್ಪ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ಸರಳವಾದ ಖಾದಿ ನಿಲುವಂಗಿ, ರೇಷ್ಮೆ ಪಂಚೆ ಹಾಗೂ ಕನ್ನಡದ ಶಾಲನ್ನು ಧರಿಸಿ ಪ್ರಶಸ್ತಿಯನ್ನು ಸ್ವೀಕರಿಸಿದ ಉಮೇಶ್ ನಾಯಕ್ ಅವರ ವ್ಯಕ್ತಿತ್ವ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದು, ಪ್ರಶಸ್ತಿಗೆ ಅರ್ಥಪೂರ್ಣತೆಯನ್ನು ತಂದಿತು.

ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಆಗಮಿಸಿದ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಸೇರಿದಂತೆ ಎಲ್ಲಾ ಗಣ್ಯ ಅತಿಥಿಗಳಿಗೆ ‘ಸುವರ್ಣ ಕರ್ನಾಟಕ’ ಲಾಂಛನವನ್ನು ತೊಡಿಸಲು ಏಷ್ಯಾನೆಟ್ ಸುವರ್ಣ ಟಿವಿ ಮತ್ತು ಕನ್ನಡಪ್ರಭ ಸಮೂಹ ಸಂಪಾದಕೀಯ ನಿರ್ದೇಶಕರಾದ ಶ್ರೀ ರವಿ ಹೆಗಡೆ ಅವರು ಉಮೇಶ್ ನಾಯಕ್ ಅವರಿಗೆ ಅವಕಾಶ ಕಲ್ಪಿಸಿದರು.

“ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ” ಎಂಬ ಮಹತ್ವಾಕಾಂಕ್ಷೆಯ ಕನಸಿನೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಪುತ್ತೂರು ತಾಲೂಕಿನ 32 ಗ್ರಾಮಗಳಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಹಾಗೂ ಗ್ರಾಮ ಸಾಹಿತ್ಯ ಸಂಭ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದು, ಶಾಸನ ಸಂಶೋಧನೆಯ ಮೂಲಕ ಇತಿಹಾಸವನ್ನು ಉಳಿಸುವ ಪ್ರಯತ್ನಗಳು, “ಕನ್ನಡದಲ್ಲೂ ಐಎಎಸ್ ಸಾಧ್ಯ” ಎಂಬ ವಿಶ್ವಾಸವನ್ನು ಯುವಜನತೆಯಲ್ಲಿ ಮೂಡಿಸಿದ ಅಭಿಯಾನ, ಕಳೆದ ಹತ್ತು ವರ್ಷಗಳಿಂದ ನೂರಕ್ಕೂ ಅಧಿಕ ನಿರ್ಗತಿಕರನ್ನು ರಕ್ಷಿಸಿ ಅವರಿಗೆ ಹೊಸ ಬದುಕಿನ ಆಶಾಕಿರಣ ನೀಡಿದ ಮಾನವೀಯ ಸೇವೆ, ಹಾಗು ತನ್ನ ದಿವ್ಯಾಂಗ ಸಹೋದರ ಸೇರಿದಂತೆ ಇತರ ಮೂವರು ದಿವ್ಯಾಂಗ ಪ್ರತಿಭೆಗಳಿಗೆ ರಾಷ್ಟ್ರಪತಿ ಪ್ರಶಸ್ತಿ ದೊರಕುವಲ್ಲಿ ವಹಿಸಿದ ಪಾತ್ರ ಇವುಗಳೆಲ್ಲವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ಪ್ರಶಸ್ತಿ ಉಮೇಶ್ ನಾಯಕ್ ಅವರ ಸಾಧನೆಗೆ ಮತ್ತೊಂದು ಗರಿಮೆಯ ಮೈಲುಗಲ್ಲಾಗಿದ್ದು, ಪುತ್ತೂರಿಗೆ ಹೆಮ್ಮೆಯ ವಿಷಯವಾಗಿದೆ.

[ “ಸುವರ್ಣ ಕನ್ನಡಿಗ – 2026” ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು ನನ್ನ ಬದುಕಿನ ಅಮೂಲ್ಯ ಕ್ಷಣವಾಗಿದೆ. ಈ ಗೌರವವನ್ನು ವೈಯಕ್ತಿಕ ಸಾಧನೆಯಾಗಿ ಕಾಣದೆ, ನನ್ನ ಮೇಲೆ ವಿಶ್ವಾಸವಿರಿಸಿ ಜವಾಬ್ದಾರಿಗಳನ್ನು ನೀಡಿದ ಮಾನ್ಯ ಶಾಸಕರು, ಸಹಾಯಕ ಆಯುಕ್ತರು, ತಹಸೀಲ್ದಾರ್ ಹಾಗೂ ತಾಲೂಕು ಆಡಳಿತ, ಪುತ್ತೂರು ತಾಲೂಕಿನ ಗ್ರಾಮ ಪಂಚಾಯತ್ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಸಾಹಿತ್ಯ ಸೇವಕರು, ರೋಟರಿ ಕ್ಲಬ್ ಪುತ್ತೂರು ಯುವದ, ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪುತ್ತೂರು ನಗರ ಹಾಗೂ ಮಹಿಳಾ ಪೊಲೀಸ್ ಠಾಣೆ, ವಿವಿಧ ಸಂಘ-ಸಂಸ್ಥೆಗಳು, ಆಶ್ರಮಗಳು, ವಿವೇಕಾನಂದ IAS ಅಧ್ಯಯನ ಕೇಂದ್ರ – ಯಶಸ್, ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕರು-ಸಂಚಾಲಕರು, ವಿವಿಧ ವಿದ್ಯಾಸಂಸ್ಥೆಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರೋತ್ಸಾಹಿಸಿದ ಸ್ನೇಹಿತರು ಮತ್ತು ಹಿತೈಷಿಗಳ ಸಮೂಹ ಗೌರವವೆಂದು ಹೃದಯಪೂರ್ವಕವಾಗಿ ಭಾವಿಸುತ್ತೇನೆ-

ಈ ಪ್ರಶಸ್ತಿಯನ್ನು ಪುತ್ತೂರಿನ ಎಲ್ಲಾ ಸಾಹಿತಿಗಳಿಗೆ, ಸಾಹಿತ್ಯ ಸೇವಕರಿಗೆ ಹಾಗೂ ಸಹೋದರ ಸುರೇಶ್ ಅವರಿಗೆ ಸಮರ್ಪಿಸುತ್ತೇನೆ –
ಪುತ್ತೂರು ಉಮೇಶ್ ನಾಯಕ್ ]

Leave a Reply

Your email address will not be published. Required fields are marked *