ಸುಳ್ಯ: ಗೂನಡ್ಕದಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯ ಆವರಣದಲ್ಲಿದ್ದ ಹರಕೆ ಹುಂಡಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಳ್ಳತನದ ದೃಶ್ಯ ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಮಾರ್ಚ್ 30ರಂದು ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಘಟನೆ ನಡೆದಿದೆ. ಮಸೀದಿಯ ಆವರಣಕ್ಕೆ ಪ್ರವೇಶಿಸಿದ ವ್ಯಕ್ತಿಯೊಬ್ಬ ಅಲ್ಲಿದ್ದ ಹರಕೆ ಹುಂಡಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ.








ಸಿಸಿಟಿವಿ ದೃಶ್ಯದಲ್ಲಿ ಆರೋಪಿಯು ನೀಲಿ ಬಣ್ಣದ ಟೀ-ಶರ್ಟ್ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿರುವುದು ಕಾಣಿಸಿಕೊಂಡಿದೆ. ಈ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಘಟನೆಯ ಕುರಿತು ಮಸೀದಿ ಕಮಿಟಿ ಪ್ರಕಟಣೆ ಹೊರಡಿಸಿದ್ದು, ಆ ಸಮಯದಲ್ಲಿ ಮಸೀದಿ ಸುತ್ತಮುತ್ತ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಅಥವಾ ವಿಡಿಯೋದಲ್ಲಿ ಕಾಣಿಸಿರುವ ಆರೋಪಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ತಕ್ಷಣ ಮಸೀದಿ ಕಮಿಟಿ ಅಥವಾ ಸಂಬಂಧಪಟ್ಟವರಿಗೆ ತಿಳಿಸುವಂತೆ ಮನವಿ ಮಾಡಿದೆ.

