ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದ ಧ್ವಜಸ್ತಂಭದ ಬಳಿ ಪ್ರತಿಭಟನೆ ನಡೆಸಲಾಗುತ್ತದೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ವಿಶ್ವಕರ್ಮ ಯುವ ಮಿಲನ ಸ್ಪಷ್ಟಪಡಿಸಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವಕರ್ಮ ಯುವ ಮಿಲನದ ಅಧ್ಯಕ್ಷ ವಿಕ್ರಂ ಮಯ್ಯ ಆಚಾರ್ಯ ಅವರು, ವಿಶ್ವಕರ್ಮ ಸಮುದಾಯದ ಒಬ್ಬ ಹೆಣ್ಣುಮಗಳಿಗೆ ಅನ್ಯಾಯವಾಗಿರುವುದಾಗಿ ಆರೋಪಿಸಿದರು. ಸಂತ್ರಸ್ತೆಯ ಮನೆಯವರಿಗೆ ಪಿ.ಜಿ. ಜಗನ್ನಿವಾಸ ರಾವ್ ಮಾತುಕೊಟ್ಟು ಬಳಿಕ ಮೌನವಾಗಿರುವುದನ್ನು ಪ್ರಶ್ನಿಸಿ, ಪತ್ರಿಕಾಗೋಷ್ಠಿಯಲ್ಲಿ ಅವರನ್ನು ದೇವಾಲಯದ ಚಾಕರಿ ಕೆಲಸದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುಂದುವರಿದು, ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಸಂತ್ರಸ್ತೆಗೆ ನ್ಯಾಯ ಸಿಗಲಿ ಹಾಗೂ ಅನ್ಯಾಯಕ್ಕೆ ಕಾರಣರಾದವರಿಗೆ ದೇವರು ಬುದ್ಧಿ ನೀಡಲಿ ಎಂದು ಬೇಡಿಕೊಂಡಿದ್ದೇವೆ. ಆದರೆ ನಾಳೆ ಜಾತ್ರೋತ್ಸವದ ಅಂಗವಾಗಿ ನಡೆಯುವ ಧ್ವಜಾರೋಹಣ ಸಂದರ್ಭದಲ್ಲಿ ಧ್ವಜಸ್ತಂಭದ ಅಡಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತೇವೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟಪಡಿಸಿದರು.
ನಮ್ಮ ವಿಶ್ವಕರ್ಮ ಸಮುದಾಯವು ಸದಾ ದೇವರ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದು, ದೇವಾಲಯದಲ್ಲಿ ಯಾವುದೇ ರೀತಿಯ ಪ್ರತಿಭಟನೆ ನಡೆಸುವ ಸಂಪ್ರದಾಯ ನಮ್ಮಲ್ಲಿಲ್ಲ. ಜಾತ್ರೋತ್ಸವ ಸೇರಿದಂತೆ ದೇವರ ಯಾವುದೇ ಕಾರ್ಯಕ್ರಮಕ್ಕೂ ತೊಂದರೆ ಉಂಟುಮಾಡುವುದಿಲ್ಲ ಎಂದು ಅವರು ಹೇಳಿದರು.
ಇನ್ನೂ, ಸಂತ್ರಸ್ತೆಯ ಕುಟುಂಬದವರನ್ನು ದೇವಾಲಯದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂಬ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯವರ ಹೇಳಿಕೆ ಸರಿಯಲ್ಲ. ವಿಷಯದ ಸೂಕ್ಷ್ಮತೆಯನ್ನು ಅರಿತು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಇದೇ ವೇಳೆ ವಿಕ್ರಂ ಮಯ್ಯ ಆಚಾರ್ಯ ತಿಳಿಸಿದರು.

Leave a Reply

Your email address will not be published. Required fields are marked *