ಪುತ್ತೂರು: ಮನೆ ಕಳೆದುಕೊಂಡ ಕಾರಣ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ವೃದ್ಧ ದಂಪತಿಗಳ ಧರಣಿಗೆ ಕೊನೆಗೂ ಅಂತ್ಯ ಕಂಡಿದೆ. ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಕಳೆದ ಹಲವು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ದಂಪತಿಗಳ ಸಮಸ್ಯೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಮಧ್ಯಪ್ರವೇಶದಿಂದ ಪರಿಹಾರ ದೊರೆತಿದೆ.

ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪಿನಬಾಗಿಲು ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸವಾಗಿದ್ದ ರಾಧಮ್ಮ–ಮುತ್ತುಸ್ವಾಮಿ ದಂಪತಿಗಳ ಮನೆಯನ್ನು ಅಕ್ರಮ ನಿರ್ಮಾಣವೆಂದು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ತೆರವುಗೊಳಿಸಲಾಗಿತ್ತು. ಈ ಕ್ರಮವನ್ನು ಖಂಡಿಸಿ ಹಾಗೂ ತಮಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಡಿಸೆಂಬರ್ 29ರಿಂದ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಲಾಗುತ್ತಿತ್ತು.

ಧರಣಿ ನಿರತ ವೃದ್ಧರನ್ನು ಭೇಟಿ ಮಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ದಂಪತಿಗಳಿಗೆ ಮನೆ ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು. ಅಲ್ಲದೆ, ಅವರು ವಾಸವಾಗಿದ್ದ ಜಾಗವನ್ನೇ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಈ ಭರವಸೆಯೊಂದಿಗೆ ಧರಣಿಯನ್ನು ಹಿಂಪಡೆಯಲಾಗಿದೆ.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗಿಸ್ ಮಾತನಾಡಿ, ವೃದ್ಧ ದಂಪತಿಗಳು ಹಿಂದೆ ಅಕ್ರಮ–ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರೂ ಅದು ತಿರಸ್ಕೃತವಾಗಿತ್ತು. ಇದೀಗ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯೂ ಶೀಘ್ರದಲ್ಲೇ ಹಿರಿಯ ಅಧಿಕಾರಿಗಳ ಕೈ ಸೇರುವ ನಿರೀಕ್ಷೆಯಿದೆ ಎಂದರು.
ನೀತಿ ತಂಡದ ಸಂಚಾಲಕ ಜಯಂತ್ ಟಿ. ಮಾತನಾಡಿ, ಒಂದು ವರ್ಷಕ್ಕೂ ಅಧಿಕ ಕಾಲ ಕಚೇರಿಗಳ ಮೆಟ್ಟಿಲೇರಿದರೂ ಸ್ಪಂದನೆ ಸಿಗದೆ ಅನಿವಾರ್ಯವಾಗಿ ಧರಣಿಗೆ ಮುಂದಾಗಬೇಕಾಯಿತು. ಇದೀಗ ಶಾಸಕರ ಮಧ್ಯಪ್ರವೇಶದಿಂದ ವೃದ್ಧರಿಗೆ ನ್ಯಾಯ ದೊರೆತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಶಾಸಕರ ಭರವಸೆಯಂತೆ ಹದಿನೈದು ದಿನಗಳೊಳಗೆ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಳ್ಳಲಿವೆ ಎಂಬ ವಿಶ್ವಾಸವನ್ನು ವೃದ್ಧ ದಂಪತಿಗಳು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *