ಕಡಬ: ರಿಕ್ಷಾ ಚಾಲಕನೊಬ್ಬ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮವಾಗಿ ಸ್ಕೂಟರ್ ಡಿಕ್ಕಿಯಾಗಿ ತಾಯಿ, ಮಗು ಹಾಗೂ ಸವಾರ ಗಾಯಗೊಂಡ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಆತೂರು ಜಂಕ್ಷನ್ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ನಿವಾಸಿ ಶಹನಾಜ್ (26) ಅವರು ತಮ್ಮ ಮಗು ಫಾತಿಮಾ ಕೆಂಜಾಳ ಮತ್ತು ತಮ್ಮ ಮಹಮ್ಮದ್ ತೋವಾ ಅವರೊಂದಿಗೆ ಮೇ 1 ರಂದು ಸ್ಕೂಟರ್ ಮೂಲಕ ತೆಕ್ಕಾರಿನಿಂದ ಮರ್ದಾಳಕ್ಕೆ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ ಸುಮಾರು 4:00 ಗಂಟೆಯ ವೇಳೆಗೆ ಆತೂರು ಜಂಕ್ಷನ್ ತಲುಪಿದಾಗ, ಇವರ ಮುಂದಕ್ಕೆ ಚಲಿಸುತ್ತಿದ್ದ ರಿಕ್ಷಾ ಚಾಲಕ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬ್ರೇಕ್ ಹಾಕಿದ್ದಾರೆ.
ಅಪಘಾತದಲ್ಲಿ ಶಹನಾಜ್ ಅವರ ಎಡ ಭುಜ ಮತ್ತು ಎಡಗೈಗೆ ಗಾಯಗಳಾಗಿದ್ದು, ಮಹಮ್ಮದ್ ತೋವಾ ಅವರಿಗೆ ಎಡಗೈ ಬೆರಳು ಹಾಗೂ ಕಾಲಿಗೆ ಗಾಯವಾಗಿದೆ. ಮಗು ಫಾತಿಮಾಗೆ ತರಚಿದ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತಕ್ಕೆ ರಿಕ್ಷಾ ಚಾಲಕ ಚಂದ್ರಶೇಖರ್ ಅವರ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಶಹನಾಜ್ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಪರಾಧ ಕ್ರಮಾಂಕ 55/2026, ಹಾಗೂ BNS (ಭಾರತೀಯ ನ್ಯಾಯ ಸಂಹಿತೆ) ಸೆಕ್ಷನ್ 281, 125 (a) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
