ಕೋಲ್ಕತ್ತಾ: ಪಶ್ಚಿಮ ಬಂಗಾಳದಾದ್ಯಂತ (West Bengal) ಚುನಾವಣಾ ಫಲಿತಾಂಶ (Election Commission) ಪ್ರಕಟವಾದ ಬಳಿಕ ವಿಜಯೋತ್ಸವ ಆಚರಣೆಯ ರ‍್ಯಾಲಿ (Victory Rallies) ನಡೆಸುವುದನ್ನು ಆಯೋಗ ನಿಷೇಧಿಸಿದೆ. ವಿಶೇಷ ವೀಕ್ಷಕ ಸುಬ್ರತಾ ಗುಪ್ತಾ ಅವರು ಈ ನಿರ್ಬಂಧವನ್ನು ದೃಢಪಡಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎಲ್ಲಿಯೂ ಯಾವುದೇ ವಿಜಯೋತ್ಸವ ಆಚರಣೆಳಿಗೆ ಅವಕಾಶ ನೀಡಲಾಗುವುದಿಲ್ಲ. ಸೂಕ್ಷ್ಮ ಎಣಿಕೆ ಪ್ರಕ್ರಿಯೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ವಿವಿಧ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟ್‌ಗಳು ಸಮಯಕ್ಕೆ ಸರಿಯಾಗಿ ಎಣಿಕೆ ಕೇಂದ್ರಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಬಂದಿವೆ. ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಕೆಲವು ಸಿಸಿಟಿವಿ ಕ್ಯಾಮೆರಾಗಳು 5-10 ನಿಮಿಷಗಳ ಕಾಲ ಕಾರ್ಯನಿರ್ವಹಿಸುತ್ತಿರಲಿಲ್ಲ. ಈಗ ಸಮಸ್ಯೆ ಪರಿಹರಿಸಲಾಗಿದೆ ಎಂದು ಗುಪ್ತಾ ತಿಳಿಸಿದ್ದಾರೆ.

ಬೆಳಗ್ಗೆ 11:50ರ ವೇಳೆಗೆ ಬಿಜೆಪಿ 195 ಮತ್ತು ಟಿಎಂಸಿ 95, ಲೆಫ್ಟ್‌ 2 ಇತರೆ ಪಕ್ಷಗಳು 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಇನ್ನೂ ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶಗಳಿಗಾಗಿ ಇನ್ನೂ ಕಾಯಲಾಗುತ್ತಿದೆ.

ಪಶ್ಚಿಮ ಬಂಗಾಳ
ರಾಜಕೀಯ ಕುತೂಹಲದ ಕೇಂದ್ರ ಪಶ್ಚಿಮ ಬಂಗಾಳದ 294 ವಿಧಾನಸಭೆಗಳಿಗೆ ಏ.23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು. ಒಟ್ಟು 2,926 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೊದಲ ಹಂತದ ಚುನಾವಣೆಗೆ 152 ಸ್ಥಾನಗಳಲ್ಲಿ 1,487 ಹಾಗೂ ಎರಡನೇ ಹಂತದ ಚುನಾವಣೆಗೆ 142 ಕ್ಷೇತ್ರಗಳಲ್ಲಿ ಒಟ್ಟು 1,448 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೊದಲ ಹಂತದಲ್ಲಿ 93.19% ಹಾಗೂ ಎರಡನೇ ಹಂತದಲ್ಲಿ 92.47% ಮತದಾನ ನಡೆಯಿತು. ಈ ರಾಜ್ಯ ಎಸ್‌ಐಆರ್‌ ಬಳಿಕ ಚುನಾವಣೆ ಎದುರಿಸಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು 148 ಸೀಟ್‌ಗಳ ಬಹುಮತ ಬೇಕಿತ್ತು. ಈ ಬಾರಿ 385 ಮಹಿಳೆಯರು ಸ್ಪರ್ಧಿಸಿದ್ದರು.

Leave a Reply

Your email address will not be published. Required fields are marked *