ಪುತ್ತೂರು: ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಮಂದಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ದೇಶದಲ್ಲಿ ಬಿಜೆಪಿ ಬೆಳೆಸಿದರೆ, ಯಡಿಯೂರಪ್ಪ ಅವರು ದಕ್ಷಿಣ ಭಾರತದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕರ್ನಾಟಕದಿಂದ ಹೆಬ್ಬಾಗಿಲು ತೆರದ ನಾಯಕರು ಎಂದು ಹೇಳಿದರು. ರೈತಾಪಿ ವರ್ಗಕ್ಕೆ ಸ್ಪಂದಿಸಿ, ಎಲ್ಲಾ ವರ್ಗಗಳ ನಾಯಕರಾಗಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿಯೂ, ಎಂಟು ಬಾರಿ ಶಾಸಕರಾಗಿಯೂ ಸೇವೆ ಸಲ್ಲಿಸಿದ ಅವರ 50 ವರ್ಷದ ರಾಜಕೀಯ ಜೀವನವನ್ನು ಸ್ಮರಿಸುವ ಉದ್ದೇಶದಿಂದ ಈ ಅಭಿಮಾನೋತ್ಸವವನ್ನು ಆಯೋಜಿಸಲಾಗಿದೆ ಎಂದರು.
ಚಿತ್ರದುರ್ಗದಲ್ಲಿ ಸುಮಾರು 120 ಎಕರೆ ಪ್ರದೇಶದಲ್ಲಿ ನಡೆಯಲಿರುವ ಈ ಮಹಾಸಭೆಯಲ್ಲಿ ಸುಮಾರು 12 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ, ಬಿಜೆಪಿ ಅಧ್ಯಕ್ಷರಾಗಿ, ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ ಹಾಗೂ ಸಂಸದೀಯ ಸಮಿತಿ ಸದಸ್ಯರಾಗಿ ಯಡಿಯೂರಪ್ಪ ಅವರು ರಾಜ್ಯಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಪುತ್ತೂರು ಭಾಗಕ್ಕೂ ಅವರ ಕೊಡುಗೆಗಳನ್ನು ಉಲ್ಲೇಖಿಸಿದ ಮಠಂದೂರು, ಕೋಟಿಚೆನ್ನಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ತಾಲೂಕು ಆಡಳಿತ ಸೌಧ, ಅಗ್ನಿಶಾಮಕ ದಳದ ಕಟ್ಟಡ, 115 ಕೋಟಿ ರೂ.ಗಳ ಜಲಸಿರಿ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಅವರು ನೀಡಿದ್ದಾರೆ ಎಂದು ಹೇಳಿದರು.
ಅಭಿಮಾನೋತ್ಸವಕ್ಕೆ ಭಾಗವಹಿಸಲು ಮೇ 8ರಂದು ರಾತ್ರಿ ಪುತ್ತೂರಿನಿಂದ ಬಸ್‌ಗಳ ಮೂಲಕ ಸಾವಿರಾರು ಮಂದಿ ತೆರಳಲಿದ್ದು, ಅನೇಕರು ಸ್ವಂತ ವಾಹನಗಳಲ್ಲಿಯೂ ಪ್ರಯಾಣಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಹರೀಶ್ ಬಿಜತ್ರೆ, ಜಿಲ್ಲಾ ಸಂಯೋಜಕ ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಉಪಾಧ್ಯಕ್ಷೆ ವಸಂತಲಕ್ಷ್ಮೀ ಹಾಗೂ ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.
