ಪುತ್ತೂರು: ಪಂಚರಾಜ್ಯ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ್ದು, ತಮಿಳುನಾಡು ಮತ್ತು ಕೇರಳದಲ್ಲೂ ಉತ್ತಮ ಸಾಧನೆ ಮಾಡಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಮೇ 4ರಂದು ಸಂಜೆ ಪುತ್ತೂರು ಬಿಜೆಪಿ ಕಚೇರಿ ಮುಂದೆ ನಡೆದ ಹರ್ಷಾಚರಣೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ದೀರ್ಘಕಾಲದ ಆಡಳಿತಕ್ಕೆ ಮತದಾರರು ಸ್ಪಷ್ಟ ಉತ್ತರ ನೀಡಿದ್ದು, ಹಿಂದುತ್ವದ ಆಧಾರದ ಮೇಲೆ ಅಭಿವೃದ್ಧಿಗೆ ಜನತೆ ಬೆಂಬಲ ಸೂಚಿಸಿದೆ ಎಂದರು.
ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ಬಿಜೆಪಿ ಜಯ ಸಾಧಿಸಿರುವುದರ ಜೊತೆಗೆ, ಕೇರಳದಲ್ಲಿ ಅಭೂತಪೂರ್ವ ಸಾಧನೆ ಹಾಗೂ ತಮಿಳುನಾಡಿನಲ್ಲಿ ಹೊಂದಾಣಿಕೆ ರಾಜಕಾರಣದ ಮೂಲಕ ಗೆಲುವು ಸಾಧಿಸಲಾಗಿದೆ ಎಂದು ಅವರು ಹೇಳಿದರು. ಈ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಅಭಿವೃದ್ಧಿ ಪರ ಚಿಂತನೆಗೆ ಜನರು ನೀಡಿದ ಬೆಂಬಲವಾಗಿದೆ ಎಂದರು.
ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದಿದ್ದರೂ, ಬಿಜೆಪಿ ತನ್ನ ಅಸ್ತಿತ್ವವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿದೆ. ಚುನಾವಣಾ ಪ್ರಕ್ರಿಯೆಯ ಕುರಿತು ಅಪಪ್ರಚಾರ ಮಾಡುವುದನ್ನು ವಿರೋಧಿಸಿ, ಕಾಂಗ್ರೆಸ್ ಪಕ್ಷವು ಇಂತಹ ಆರೋಪಗಳನ್ನು ನಿಲ್ಲಿಸಬೇಕು ಎಂದು ಮಠಂದೂರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪಂಚರಾಜ್ಯ ಚುನಾವಣೆಯ ಫಲಿತಾಂಶವು ಹಿಂದುತ್ವದ ಮಾರ್ಗದಲ್ಲಿ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಹೇಳಿದರು. ಪಶ್ಚಿಮ ಬಂಗಾಳದಲ್ಲಿ ಸಾಧಿಸಿದ ಗೆಲುವು ಶ್ಯಾಮಪ್ರಸಾದ್ ಮುಖರ್ಜಿ ಅವರ ಕನಸಿಗೆ ಸಾಕಾರ ರೂಪ ನೀಡಿದಂತಾಗಿದೆ ಎಂದರು.
ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಚರುಂಬುರಿ ಹಂಚಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚುವುದರ ಮೂಲಕ ಬಸ್ ನಿಲ್ದಾಣ, ದರ್ಬೆ ಹಾಗೂ ಪುರುಷರಕಟ್ಟೆ ಪ್ರದೇಶಗಳಲ್ಲಿ ಹರ್ಷಾಚರಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ಆರ್.ಸಿ. ನಾರಾಯಣ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
