ಕಡಬ: ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಮನಸ್ತಾಪ ವಿಕೋಪಕ್ಕೆ ತಿರುಗಿ ಮಹಿಳೆಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಆರೋಪದಡಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐತೂರು ಗ್ರಾಮದ ಕೇರ್ಮಾಯಿ ಪಾದೆ ಮಜಲು ನಿವಾಸಿ ಬೇಬಿ ಕೆ.ಎಸ್. ಅವರು ನೀಡಿದ ದೂರಿನ ಮೇರೆಗೆ ಕುಸುಮಾಧರ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಪ್ರಕಾರ, ಬೇಬಿ ಅವರು ತಮ್ಮ ಪತಿ ನೋಣಯ್ಯ ಗೌಡ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದು, ಮಾವ ಈಶ್ವರ ಗೌಡ ಅವರು ಸುಮಾರು ಎಂಟು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಕುಟುಂಬದ ಆಸ್ತಿ ವಿಚಾರದಲ್ಲಿ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಅತ್ತೆಯವರ ಹೆಸರಿನಲ್ಲಿದ್ದ ಸುಮಾರು ಎರಡು ಎಕರೆ ಜಾಗವನ್ನು ಬಾಯ್ದರೆ ಮೂಲಕ ಇಬ್ಬರು ಪುತ್ರರಿಗೆ ಹಂಚಿಕೊಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾವು ಅತ್ತೆಯವರು ನೀಡಿದ ಜಾಗದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಿಸಿದ್ದು, ಬೋರ್‌ವೆಲ್ ತೆಗೆಸಿದ ವೇಳೆ ನೀರು ಸಿಕ್ಕಿತ್ತು. ಇದೇ ವಿಚಾರಕ್ಕೆ ಮೈದುನ ಕುಸುಮಾಧರ ಅಸೂಯ ವ್ಯಕ್ತಪಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಮೇ 4ರಂದು ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಕುಸುಮಾಧರ ಪೆಟ್ರೋಲ್ ಕ್ಯಾನ್ ಹಿಡಿದು ಬಂದು, “ನೀವು ನೆಮ್ಮದಿಯಾಗಿ ಇರಬಾರದು, ಕೊಂದು ಬಿಡುತ್ತೇನೆ” ಎಂದು ಬೆದರಿಕೆ ಹಾಕಿ ಪೆಟ್ರೋಲ್ ಸುರಿದಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೆಟ್ರೋಲ್ ದೇಹಕ್ಕೆ ಬಿದ್ದ ತಕ್ಷಣ ತಾವು ಕಿರುಚಿಕೊಂಡಿದ್ದು, ಶಬ್ದ ಕೇಳಿ ಅತ್ತೆಯವರು ಸ್ಥಳಕ್ಕೆ ಬಂದಾಗ ಆರೋಪಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 109(1) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
