ಪುತ್ತೂರು: ಕಾರು ವ್ಯಾಪಾರದ ಮಾತುಕತೆ ವೇಳೆ ತಂಡವೊಂದು ವ್ಯಕ್ತಿಯೋರ್ವರಿಗೆ ಚೂರಿಯಿಂದ ತಿವಿದು ಹಲ್ಲೆ ನಡೆಸಿದ ಘಟನೆ ಕೆದಿಲ ಗ್ರಾಮದ ಸತ್ತಿಕಲ್ಲು ಪೆಟ್ರೋಲ್ ಪಂಪ್ ಬಳಿ ನಡೆದಿದೆ.

ಕೆದಿಲ ಗ್ರಾಮದ ಸರೋಳಿ ನಿವಾಸಿ ಅಬೂಬಕ್ಕರ್ ರಾಶೀಕ್ (28) ಎಂಬವರು ಚೂರಿಯಿರಿತದಿಂದ ಗಾಯಗೊಂಡವರು

ಬೆಂಗಳೂರಿನ ಶ್ರೀರಾಮ ಫೈನಾನ್ಸ್‌ನವರು ಸ್ವಾಧೀನಕ್ಕೆ ತೆಗೆದುಕೊಂಡ ಇನ್ನೋವ ಕಾರನ್ನು ಅಬೂಬಕ್ಕರ್ ರಾಶಿಕ್ ಅವರಿಗೆ ಮಾರಿದ್ದರು. ಆದರೆ ಕಾರಿನ ಮಾಲಕ ಸೂರಜ್ ಅದೇ ಕಾರನ್ನು ಪುನಃ ಖರೀದಿಸಲು ತನ್ನ 7ರಿಂದ 8 ಮಂದಿ ಸ್ನೇಹಿತರ ಜೊತೆಯಲ್ಲಿ ಅಬೂಬಕ್ಕರ್ ರಾಶಿಕ್ ಅವರ ಜೊತೆ ಕೆದಿಲ ಸತ್ತಿಕಲ್ ಪೆಟ್ರೋಲ್ ಪಂಪ್‌ ಬಳಿ ವ್ಯಾಪಾರದ ಮಾತುಕತೆ ನಡೆಸುತ್ತಿದ್ದರು.

ಈ ವೇಳೆ ಸೂರಜ್ ಅವರು ಅಬೂಬಕ್ಕರ್ ಅವರಿಂದ ಕಾರಿನ ಕೀಯನ್ನು ಬಲವಂತವಾಗಿ ಕಸಿಯಲು ಯತ್ನಿಸಿದ್ದು ಇದಕ್ಕೆ ಅಬೂಬಕ್ಕ‌ರ್ ಅವರು ವಿರೋಧ ವ್ಯಕ್ತಪಡಿಸಿದಾಗ ಸೂರಜ್, ಮತ್ತಿತರರು ಸೇರಿ ಅಬೂಬಕ್ಕ‌ರ್ ಅವರಿಗೆ ಚೂರಿಯಿಂದ ತಿವಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯಿಂದ ಗಾಯಗೊಂಡ ಅಬೂಬಕ್ಕರ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ,ತನಗೆ ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *