ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಮಹಿಳಾ ಟೆಕ್ಕಿ ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣಕ್ಕೆ ಇದೀಗ ಸ್ಪೋಟಕ ತಿರುವು ಸಿಕ್ಕಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಆಕೆಯನ್ನು ಹತ್ಯೆ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

ಮೃತಳನ್ನು ಶರ್ಮಿಳಾ (34) ಎಂದು ಗುರುತಿಸಲಾಗಿದ್ದು, ಅವರು ಮೂಲತಃ ಮಂಗಳೂರಿನವರಾಗಿದ್ದಾರೆ. ಒಂದು ವರ್ಷ ಹಿಂದೆ ಬೆಂಗಳೂರಿಗೆ ಬಂದು ಅಕ್ಸೆಂಚರ್ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆ ಜನವರಿ 3ರ ರಾತ್ರಿ ನಡೆದಿದ್ದು, ಜನವರಿ 5ರಂದು ಬೆಳಕಿಗೆ ಬಂದಿದೆ. ಜನವರಿ 3ರಂದು ರಾತ್ರಿ ಸುಮಾರು 10.30ರ ವೇಳೆಗೆ ಶರ್ಮಿಳಾ ವಾಸಿಸುತ್ತಿದ್ದ ಫ್ಲಾಟ್‌ನ ಒಂದು ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಮನೆ ಮಾಲೀಕ ವಿಜಯೇಂದ್ರ ಅವರು ರಾಮಮೂರ್ತಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಬೆಂಕಿ ಹೊತ್ತಿಕೊಂಡ ಪರಿಣಾಮ ರೂಮ್‌ನಿಂದ ಹೊರಬರಲಾಗದೆ ಶರ್ಮಿಳಾ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬ ಶಂಕೆ ಮೊದಲಿಗೆ ವ್ಯಕ್ತವಾಗಿತ್ತು.
ಆದರೆ ಪ್ರಕರಣದ ತನಿಖೆ ವೇಳೆ ಹಲವು ಅನುಮಾನಾಸ್ಪದ ಅಂಶಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸಮೀಪದ ನಿವಾಸಿಯಾಗಿದ್ದ ಯುವಕ ಕರ್ನಲ್ ಕುರೈಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆತ ಸತ್ಯ ಬಾಯಿ ಬಿಟ್ಟಿದ್ದಾನೆ. ಆರೋಪಿಯು ಕೇರಳ ಮೂಲದ 18 ವರ್ಷದ ಕರ್ನಲ್ ಕುರೈ ಎಂದು ತಿಳಿದುಬಂದಿದೆ.

ಶರ್ಮಿಳಾ ಹಾಗೂ ಆರೋಪಿ ಅಕ್ಕಪಕ್ಕದ ನಿವಾಸಿಗಳಾಗಿದ್ದು, ಸಾಮಾನ್ಯವಾಗಿ ಶರ್ಮಿಳಾ ಎದುರು ಬಂದಾಗ ಆರೋಪಿ ನಗುಮುಖದಿಂದ ಮಾತನಾಡಿಸುತ್ತಿದ್ದ. ಇದನ್ನೇ ಪ್ರೀತಿ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ ಆರೋಪಿ, ಆಕೆಯನ್ನು ಪ್ರೀತಿಸಲು ಆರಂಭಿಸಿದ್ದನು. ಘಟನೆ ನಡೆದ ದಿನ ರಾತ್ರಿ ಶರ್ಮಿಳಾ ಮನೆಗೆ ತೆರಳಿದ ಆರೋಪಿ, ಆಕೆಯನ್ನು ಹಿಂದಿನಿಂದ ತಬ್ಬಿಕೊಂಡಿದ್ದಾನೆ. ಇದರಿಂದ ಗಾಬರಿಯಾದ ಶರ್ಮಿಳಾ ಆತನನ್ನು ತಳ್ಳಿ ಬೈದಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಹಲ್ಲೆ ನಡೆಸಿ, ತಲೆಯಡಿಗೆ ಇಡುವ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಗೊಳಿಸುವ ಉದ್ದೇಶದಿಂದ ಅದೇ ತಲೆದಿಂಬಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪರಾರಿಯಾಗುವ ವೇಳೆ ಶರ್ಮಿಳಾ ಅವರ ಮೊಬೈಲ್ ಫೋನನ್ನು ಕೂಡ ತೆಗೆದುಕೊಂಡು ಹೋಗಿದ್ದಾನೆ. ಆ ಮೊಬೈಲ್ ಫೋನ್ ಆಧಾರವಾಗಿಯೇ ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಆರೋಪಿ ಪೊಲೀಸ್ ವಶದಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಪ್ರಕರಣದ ಸಂಪೂರ್ಣ ಸತ್ಯಾಂಶ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *