ಸುಬ್ರಹ್ಮಣ್ಯ, ಜ.12: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ರವಿವಾರದಂತೆ ಈ ವಾರವೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರಿಂದ ದೇವಳ ಪರಿಸರ ಭಕ್ತ ಸಾಗರವಾಗಿ ಪರಿಣಮಿಸಿತು. ಬೆಳಗ್ಗಿನಿಂದಲೇ ದೇವಳದ ಮುಂಭಾಗದ ಗೋಪುರದ ಬಳಿ ಆರಂಭವಾದ ಭಕ್ತರ ಜನಜಂಗುಳಿ ಒಳಾಂಗಣದವರೆಗೂ ವಿಸ್ತರಿಸಿಕೊಂಡಿದ್ದು, ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಂತು ಭಕ್ತರು ಶ್ರೀ ದೇವರ ದರ್ಶನ ಪಡೆದರು.





ಒಂದು ಹಂತದಲ್ಲಿ ಭಕ್ತರ ಸಂಖ್ಯೆಯು ಹೆಚ್ಚಾದ ಕಾರಣ ದೇವಳದ ಹೊರಾಂಗಣ ಪ್ರವೇಶ ದ್ವಾರದಲ್ಲಿ ಭಕ್ತರ ಸರತಿಯನ್ನು ಕೆಲಕಾಲ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ನಂತರ ದರ್ಶನ ಪಡೆದು ಹೊರಬಂದ ಭಕ್ತರ ಸಂಖ್ಯೆ ಕಡಿಮೆಯಾದಂತೆ ಮತ್ತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರಿಗೆ ಸುಗಮ ಹಾಗೂ ಶಾಂತಿಯುತ ದರ್ಶನ ಒದಗಿಸುವ ನಿಟ್ಟಿನಲ್ಲಿ ದೇವಳದ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರು.


ಪ್ರಸಾದ ಕೊಠಡಿಯಲ್ಲಿ ಶ್ರೀ ದೇವರ ಲಡ್ಡು, ಪಂಚಗಜ್ಜಾಯ ಹಾಗೂ ತೀರ್ಥ ಬಾಟಲಿ ಪಡೆಯಲು ಭಕ್ತರ ದೀರ್ಘ ಸಾಲುಗಳು ಕಂಡುಬಂದವು. ಇತ್ತ ದೇವಳದ ಗೋಪುರದ ಮುಂಭಾಗದ ರಥಬೀದಿಯಲ್ಲಿ ಭಕ್ತರ ಸಮೂಹವೇ ಜಮಾಯಿಸಿದ್ದು, ವಾಹನ ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ತುಂಬಿದ್ದವು.
ಆದಿ ಸುಬ್ರಹ್ಮಣ್ಯ ದೇವಳಕ್ಕೆ ತೆರಳುವ ಭಕ್ತರು ದೇವಳದ ಹೊರಬಾಗಿಲಿನಿಂದ ಸರದಿ ಸಾಲಿನಲ್ಲಿ ತೆರಳಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ವಾಪಸಾಗುತ್ತಿದ್ದರು. ಆದಿ ಸುಬ್ರಹ್ಮಣ್ಯ ದೇವಳದಲ್ಲಿಯೂ ಭಕ್ತರ ದರ್ಶನ ಸೇವೆಗೆ ಅಗತ್ಯ ವ್ಯವಸ್ಥೆಗಳನ್ನು ದೇವಳದ ಸಿಬ್ಬಂದಿ ಕಲ್ಪಿಸಿದ್ದರು.
ಇನ್ನೊಂದು ಕಡೆ ಶಬರಿಮಲೆಗೆ ತೆರಳುವ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಗುಂಪು ಗುಂಪಾಗಿ ಕುಕ್ಕೆ ಕ್ಷೇತ್ರದಲ್ಲಿ ಕಂಡುಬಂದಿದ್ದು, ಆದಿ ಸುಬ್ರಹ್ಮಣ್ಯ ದೇವಳ, ರಥಬೀದಿ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ವಿಶೇಷ ಸಂಚಲನ ಕಂಡುಬಂತು.
ಭಕ್ತರ ಅನುಕೂಲಕ್ಕಾಗಿ ದೇವಳದ ವತಿಯಿಂದ ಬೆಳಗ್ಗಿನಿಂದಲೇ ಫೋಟೋ ಪ್ರಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಳಿಗ್ಗೆ 8 ಗಂಟೆಗೆ ಆರಂಭವಾದ ಉಪಹಾರ ವ್ಯವಸ್ಥೆ 10.30ರವರೆಗೆ ಮುಂದುವರಿಯಿತು. ಮಧ್ಯಾಹ್ನ 11 ಗಂಟೆಯಿಂದ ಭೋಜನ ವ್ಯವಸ್ಥೆಯನ್ನೂ ದೇವಳದವರು ಸಮರ್ಪಕವಾಗಿ ಆಯೋಜಿಸಿದ್ದರು. ಒಟ್ಟಿನಲ್ಲಿ ಕುಕ್ಕೆ ಕ್ಷೇತ್ರವು ಭಕ್ತಿಭಾವದಿಂದ ಕಂಗೊಳಿಸುತ್ತಾ ಭಕ್ತ ಸಾಗರದ ಸನ್ನಿವೇಶಕ್ಕೆ ಸಾಕ್ಷಿಯಾಯಿತು.


