ಬೆಂಗಳೂರು: ನಗರದ ಆಕ್ಸ್ಫರ್ಡ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಆರು ಉಪನ್ಯಾಸಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಜನವರಿ 8ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಉಪನ್ಯಾಸಕರ ಕಿರುಕುಳ ಹಾಗೂ ಜನಾಂಗೀಯ ನಿಂದನೆಯೇ ಆತ್ಮಹತ್ಯೆಗೆ ಕಾರಣವೆಂದು ಕುಟುಂಬಸ್ಥರು ಹಾಗೂ ಸಹಪಾಠಿಗಳು ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಯಶಸ್ವಿನಿಯ ಕುಟುಂಬವು ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಐದು ಮಂದಿ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.





ದೂರು ಹಾಗೂ ಎಫ್ಐಆರ್ ದಾಖಲಾಗುತ್ತಿದ್ದಂತೆ ಆಕ್ಸ್ಫರ್ಡ್ ಡೆಂಟಲ್ ಕಾಲೇಜಿನ ಆಡಳಿತ ಮಂಡಳಿ ತ್ವರಿತ ಕ್ರಮ ಕೈಗೊಂಡು ಓಎಂಆರ್ ವಿಭಾಗದ ಲೆಕ್ಚರರ್ಗಳಾದ ಡಾ. ಅನಿಮೋಲ್, ಡಾ. ಶಭಾನಾ, ಡಾ. ಪೈಕಾ, ಡಾ. ಸಿಂಧು, ಡಾ. ಸುಶ್ಮಿನಿ ಹಾಗೂ ಡಾ. ಅಲ್ವಾ ಅವರನ್ನು ಕೆಲಸದಿಂದ ವಜಾ ಮಾಡಿದೆ.
ಸಹಪಾಠಿಗಳ ಎದುರೇ ಯಶಸ್ವಿನಿಯ ಮೈಬಣ್ಣ ಹಾಗೂ ವಸ್ತ್ರಧಾರಣೆ ಕುರಿತು ಅವಮಾನಕಾರಿ ಟೀಕೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. “ಕಪ್ಪು ಬಣ್ಣದ ನಿನಗೆ ಡಾಕ್ಟರ್ ಆಗಬೇಕಾ” ಎಂದು ನಿಂದನೆ ನಡೆಸಲಾಗಿತ್ತೆಂದು ಸಹಪಾಠಿಗಳು ಆರೋಪಿಸಿದ್ದಾರೆ. ಅಲ್ಲದೆ, ಕಣ್ಣು ನೋವು ಕಾರಣವಾಗಿ ಒಂದು ದಿನ ಕಾಲೇಜಿಗೆ ರಜೆ ಹಾಕಿದ್ದಕ್ಕೆ ಸೆಮಿನಾರ್ ಹಾಗೂ ರೆಡಿಯಾಲಜಿ ಕೇಸ್ ನೀಡದೇ ಕೊಂಕು ಮಾತುಗಳಿಂದ ನಿಂದಿಸಲಾಗಿತ್ತೆಂದು ತಿಳಿದುಬಂದಿದೆ. ಈ ಎಲ್ಲ ಘಟನೆಗಳಿಂದ ಮನನೊಂದ ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಳೆಂದು ಆರೋಪಿಸಲಾಗಿದೆ.


ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಯಶಸ್ವಿನಿಯ ತಾಯಿ ಪರಿಮಳ, “ನನ್ನ ಮಗಳು ವೈದ್ಯೆಯಾಗಿ ಸಮಾಜ ಸೇವೆ ಮಾಡಬೇಕೆಂಬ ಕನಸು ಕಂಡಿದ್ದಳು. ಆದರೆ ಕಾಲೇಜಿನ ಲೆಕ್ಚರರ್ಗಳು ಆಕೆಯ ಕನಸನ್ನು ನುಚ್ಚು ನೂರಾಗಿಸಿದ್ದಾರೆ. ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅವಳಿಗೆ ಸಿಗುವ ನ್ಯಾಯ ಎಲ್ಲ ವಿದ್ಯಾರ್ಥಿಗಳಿಗೆ ಸಂದೇಶವಾಗಬೇಕು” ಎಂದು ಕಣ್ಣೀರಿಟ್ಟರು.
ಇದೇ ವೇಳೆ ಯಶಸ್ವಿನಿಯ ಸಹಪಾಠಿಗಳು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿ, ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಯಶಸ್ವಿನಿಯ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಿಯಾ ಸೇರಿದಂತೆ ಒಟ್ಟು ಐದು ಮಂದಿಯ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.


