ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೊಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತ ಮಹಿಳೆಯನ್ನು ಶೋಭಾ (40) ಎಂದು ಗುರುತಿಸಲಾಗಿದೆ.

ಇಂದು ಮುಂಜಾನೆ ಕಾಫಿ ತೋಟದಲ್ಲಿ ಸುಣ್ಣ ಹಚ್ಚುವ ಕೆಲಸಕ್ಕೆ ರಾಜಮ್ಮ ಅವರು ತಮ್ಮ ಪುತ್ರಿಯರಾದ ಶೋಭಾ ಹಾಗೂ ರಾಗಿಣಿ ಜೊತೆ ತೆರಳಿದ್ದರು. ಕೆಲಸದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ಪ್ರಾಣ ಉಳಿಸಿಕೊಳ್ಳಲು ಮೂವರೂ ಓಡಿದಾಗ ಶೋಭಾರನ್ನು ಬೆನ್ನಟ್ಟಿದ ಸಲಗ ಆಕೆಯನ್ನು ತುಳಿದು ಸ್ಥಳದಲ್ಲೇ ಸಾವಿಗೆ ಕಾರಣವಾಯಿತು.

ಘಟನೆಯ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಆದರೆ ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟಿರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹವನ್ನು ಸ್ಥಳದಲ್ಲೇ ಇಟ್ಟು ಶವ ಮೇಲೆತ್ತಲು ಬಿಡದೆ ಧರಣಿ ನಡೆಸಿದರು. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿದರು.
ಕಾಡಾನೆಗಳ ಸಂಚಾರದ ಬಗ್ಗೆ ಮುಂಚಿತ ಮಾಹಿತಿ ನೀಡಲಾಗುತ್ತಿಲ್ಲ, ಪುಂಡಾನೆಗಳನ್ನು ಸೆರೆಹಿಡಿಯಲಾಗುತ್ತಿಲ್ಲ ಹಾಗೂ ರೇಡಿಯೋ ಕಾಲರ್ ಅಳವಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಹಾಗೂ ಡಿಎಫ್‌ಓ ಸೌರಭಕುಮಾರ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಶವ ಮೇಲೆತ್ತಲು ನಿರಾಕರಿಸಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.

ಮೃತ ಮಹಿಳೆಯ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರ ನೀಡಬೇಕು ಹಾಗೂ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

Leave a Reply

Your email address will not be published. Required fields are marked *