ಪುತ್ತೂರು: ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜಲ ಜೀವನ್ ಮಿಷನ್ (ಹರ್ ಘರ್ ಜಲ್) ಯೋಜನೆಯ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಸುಳ್ಯ ತಾಲೂಕಿನ ಅಮರಮೂಡ್ನೂರಿನಲ್ಲಿ ನೂತನ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ (MRF) ಸ್ಥಾಪನೆಗೆ ವಿಧಾನ ಪರಿಷತ್ ಸದಸ್ಯರಾದ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಮನವಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಕೇಳಲಾದ ಚುಕ್ಕೆ ಗುರುತಿನ ಪ್ರಶ್ನೆಗೆ ದೊರೆತ ಉತ್ತರದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ 230 ಗ್ರಾಮ ಪಂಚಾಯತಿಗಳಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ 42 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಅದೇ ರೀತಿ, ಉಡುಪಿ ಜಿಲ್ಲೆಯ 155 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಮುಕ್ತಾಯಗೊಂಡಿದ್ದು, 39 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಳ್ಳಬೇಕಿದೆ.
ಯೋಜನೆ ಆರಂಭಗೊಂಡು ಸುಮಾರು ಐದು ವರ್ಷಗಳಾದರೂ ಹಲವೆಡೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ, ಉಭಯ ಜಿಲ್ಲೆಗಳ ಸಾವಿರಾರು ಗ್ರಾಮೀಣ ಕುಟುಂಬಗಳಿಗೆ ಯೋಜನೆಯ ಸಂಪೂರ್ಣ ಲಾಭ ದೊರಕಲು ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಗಮನಿಸಿದ ಶಾಸಕರು, ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾದ ಶ್ರೀ ರಂದೀಪ್, IAS ಅವರಿಗೆ ಮನವಿ ಸಲ್ಲಿಸಿದರು.
ನೂತನ MRF ಅಗತ್ಯ:

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ 68 ಗ್ರಾಮ ಪಂಚಾಯತಿಗಳಿಂದ ಸಂಗ್ರಹವಾಗುವ ಒಣಕಸವನ್ನು ಪುತ್ತೂರು ತಾಲೂಕಿನ ಕೆದಂಬಾಡಿಯಲ್ಲಿರುವ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಸಂಸ್ಕರಿಸಲಾಗುತ್ತಿದೆ. ಆದರೆ, ಈ ಘಟಕದ ಸಾಮರ್ಥ್ಯ ಕೇವಲ 7 ಟನ್ ಆಗಿದ್ದು, ಸಂಗ್ರಹವಾಗುತ್ತಿರುವ ಒಣಕಸದ ಪ್ರಮಾಣ ಸಾಮರ್ಥ್ಯ ಮೀರಿರುವುದರಿಂದ ಹಾಗೂ ವ್ಯಾಪ್ತಿಯ ವಿಸ್ತಾರದಿಂದ ತ್ಯಾಜ್ಯ ನಿರ್ವಹಣೆಯಲ್ಲಿ ಗಂಭೀರ ಅಡಚಣೆಗಳು ಎದುರಾಗುತ್ತಿವೆ ಎಂದು ಶಾಸಕರು ವಿವರಿಸಿದರು.
ಈ ಹಿನ್ನಲೆಯಲ್ಲಿ, ‘ಕೆ-ಶೋರ್’ ಯೋಜನೆಯಡಿ ಸುಳ್ಯ ತಾಲೂಕಿನ ಅಮರಮೂಡ್ನೂರಿನಲ್ಲಿ 10 ಟನ್ ಸಾಮರ್ಥ್ಯದ ನೂತನ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ (MRF) ನಿರ್ಮಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು. ಈ ಯೋಜನೆಗಾಗಿ ರೂ. 595 ಲಕ್ಷಗಳ ಅಂದಾಜು ವೆಚ್ಚದ ವಿಸ್ತೃತ ಯೋಜನಾ ವರದಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಆದಷ್ಟು ಶೀಘ್ರವಾಗಿ ನೂತನ MRF ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಇದಕ್ಕೆ ಹೆಚ್ಚುವರಿಯಾಗಿ, ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಜೈವಿಕ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಇನ್ಸಿನರೇಟರ್ ಮೆಷಿನ್ ಘಟಕದ ಅಗತ್ಯವಿದೆ ಎಂಬುದನ್ನೂ ಶಾಸಕರು ಆಯುಕ್ತರ ಗಮನಕ್ಕೆ ತಂದರು. ಈ ಕುರಿತು ಸ್ಪಂದಿಸಿದ ಆಯುಕ್ತರು, ಸಂಬಂಧಿತ ಘಟಕಗಳಿಗೆ ಅನುದಾನ ಒದಗಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕರ ಮನವಿಗೆ ಸ್ಪಂದಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರು, ಉಲ್ಲೇಖಿತ ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *