ಪುತ್ತೂರು: ಮಾಜಿ ಪ್ರಧಾನಿ, ಭಾರತರತ್ನ, ಆಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ' ಹಿನ್ನೆಲೆಯಲ್ಲಿ ನ.19 ರಂದು ಪುತ್ತೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದಅಟಲ್ ವಿರಾಸತ್’ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ವಾಜಪೇಯಿ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಐತಿಹಾಸಿಕ ಕಾರ್ಯಕ್ರಮವಾಗಿ ಗುರುತಿಸಿಕೊಳ್ಳಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮ ಪುತ್ತೂರು ನಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯ ಮೈದಾನದಲ್ಲಿ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರಹಾಗೂ ಜಿಲ್ಲೆಯ ಶಾಸಕರು ಆಗಮಿಸಲಿದ್ದಾರೆ. ಬೃಹತ್ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸವುದಕ್ಕೆ ಪೂರಕ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಬೆಳಗ್ಗೆ 9.30 ಕ್ಕೆ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಕಾರ್ಯಕ್ರಮ ನಡೆಯುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯ ಮೈದಾನಕ್ಕೆ ಮೆರವಣಿಗೆ ನಡೆಯಲಿದೆ. ಹಿಂದೆ 1991 ರಲ್ಲಿ ಎ.14 ರಂದು ಅಟಲ್ ಬಿಹಾರಿ ವಾಜಪೇಯಿ ಅವರು ಪುತ್ತೂರಿಗೆ ಬಂದು ಭಾಗವಹಿಸಿದ ಕಾರ್ಯಕ್ರಮ ನಡೆದ ಸ್ಥಳದಲ್ಲೇ ಜನ್ಮ ಶತಾಬ್ದಿಯ ಕಾರ್ಯಕ್ರಮವನ್ನೂ ಆಯೋಜಿಸಿರುವುದು ವಿಶೇಷ. ಅವರು ಪುತ್ತೂರಿಗೆ ಒಟ್ಟು 3 ಬಾರಿ ಭೇಟಿ ನೀಡಿದ್ದರು ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರು
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಷ್ಟ್ರೀಯ ನಾಯಕರು, ದ.ಕ., ಉಡುಪಿ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಅವರನ್ನೂ ಸಂಪರ್ಕಿಸಲಾಗಿದೆ. ತಾಲೂಕಿನ 45 ಗ್ರಾಮಗಳಲ್ಲಿ ಈಗಾಗಲೇ ಸಭೆ ನಡೆಸಿ ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ. ಪುತ್ತೂರಿನ 34 ಕೇಂದ್ರಗಳಲ್ಲಿ ಅಭ್ಯಾಸವರ್ಗ ಯಸಸ್ವಿಯಾಗಿ ಮಾಡಲಾಗಿದೆ ಎಂದು ಕುಂಪಲ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರು 1980 ರಿಂದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಪ್ರಧಾನ ಮಂತ್ರಿಯಾಗಿ ದೇಶದ ಅಭಿವೃದ್ಧಿಗೆ ಬುನಾದಿ ಹಾಕಿದವರು. ಅವರ ಜನ್ಮ ಶತಾಬ್ದಿ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಹಿರಿಯರನ್ನು ಗೌರವಿಸುವ ಕೆಲಸವನ್ನು ಈಗಾಗಲೇ ಪಕ್ಷದಿಂದ ಮಾಡಲಾಗಿದೆ. ಮುಂದೆಯೂ ಸುಮಾರು 100 ಮಂದಿ ಹಿರಿಯರನ್ನು ಗುರುತಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಅಟಲ್ ವಿರಾಸತ್ ಕಾರ್ಯಕ್ರಮ ಪುತ್ತೂರಿಗೆ ಅತ್ಯಂತ ಸಂಭ್ರಮದ ಕಾರ್ಯಕ್ರಮವಾಗಲಿದೆ. ಅಪ್ರತಿಮ ದೇಶಭಕ್ತ, ವಾಗ್ಮಿ, ವಿದೇಶಾಂಗ ನೀತಿಜ್ಞ, ಕವಿ, ಬರಹಗಾರ, ವಿರೋಧ ಪಕ್ಷದವರೂ ಅಪ್ಪಿ ಒಪ್ಪುವ ಅಟಲ್ ನಮ್ಮ ಪ್ರಧಾನಿಯಾಗಿದ್ದರು ಎನ್ನುವುದಲ್ನಮಗೆಲ್ಲರಿಗೂ ಹೆಮ್ಮೆ. ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿ ಪುತ್ತೂರಿಗೆ ನೀಡಿದ್ದಾರೆ. ಪಕ್ಷ ಮರೆತು ವಾಜಪೇಯಿ ಅಭಿಮಾನಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ಅಟಲ್ ವಿರಾಸತ್ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಕಿಶೋರ್ ಪುತ್ತೂರು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಸನ್ನ ಮಾರ್ತಾ, ಪ್ರಶಿಕ್ಷಣ ಪ್ರಕೋಷ್ಠಾದ ಜಿಲ್ಲಾ ಸಂಚಾಲಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಜಿಲ್ಲಾ ವಕ್ತಾರ ಹರೀಶ್ ಜಿ. ಶೇಟ್, ಪ್ರಮುಖರಾದ ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ, ಹರಿಪ್ರಸಾದ್ ಯಾದವ್, ಉಪಸ್ಥಿತರಿದ್ದರು.

