ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು
ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ ಮುಗಿದು ಉತ್ತರಾಯಣ ಪ್ರವೇಶದ ಪುಣ್ಯಕಾಲ ಜ.14ರ ಮಕರ ಸಂಕ್ರಮಣದಂದು ರಾತ್ರಿಪೂಜೆ ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಪೂರ್ವಶಿಷ್ಟ ಪದ್ಧತಿಯಂತೆ ಶ್ರೀದೇವರಿಗೆ ಕನಕಾಭಿಷೇಕ ನಡೆಯಿತು. ಬೆಳಿಗ್ಗೆ ಧನುಪೂಜೆಗೆ ದೇವಳದ ಒಳಗೆ ಭಕ್ತಸಾಗರವೇ ತುಂಬಿತ್ತು. ಭಕ್ತರಿಗೆಲ್ಲರಿಗೂ ಪೂಜೆಯ ಪ್ರಸಾದ ಜೊತೆಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ರಾತ್ರಿ ಮಹಾಲಿಂಗೇಶ್ವರ ದೇವರಿಗೆ ದೇವಳದ ಪ್ರಧಾನ ಅರ್ಚಕರಾದ ವಿ.ಎಸ್.ಭಟ್ ಅವರಿಂದ ಪೂಜೆ ನಡೆಯಿತು. ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಕನಕಾಭಿಷೇಕ ಜರುಗಿತು. ಅದಕ್ಕೂ ಮೊದಲು ರಾಧಾಕೃಷ್ಣ ನಂದಿಲ ಸೇವಾರ್ಥ ಪಲ್ಲಕಿ ಸೇವೆ ನಡೆಯಿತು. ಅರಸೊತ್ತಿಗೆಯ ಕಾಲದಲ್ಲಿ ದೇವಳದ ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಕನಕಾಭಿಷೇಕ ನೆರವೇರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರಿಗೆ ಸೂತಕದ ಹಿನ್ನಲೆಯಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್‌ ಅವರು ಕನಕಾಭಿಷೇಕ ನೆರವೇರಿಸಿದರು. ರಾತ್ರಿ ಕನಕಾಭಿಷೇಕದ ಆಗುವ ವೇಳೆ ದೇವಳದ ಕಚೇರಿಯಲ್ಲೇ ಕೂತು ಕಾರ್ಯಕ್ರಮ ವೀಕ್ಷಿಸಿದ ಈಶ್ವರ ಭಟ್ ಪಂಜಿಗುಡ್ಡೆಯವರು ಕಾರ್ಯಕ್ರಮ ಮುಗಿದು ಭಕ್ತರಿಗೆ ಪ್ರಸಾದ ವಿತರಣೆಯ ಬಳಿಕ ಮನೆಗೆ ತೆರಳಿದರು.

ಭಂಡಾರದ ವತಿಯಿಂದ ಒಂದು ದೊಡ್ಡ ಹರಿವಾಣದಲ್ಲಿ ಹೊದ್ದು, ವೀಳ್ಯದೆಲೆ, ಅಡಿಕೆ, ಕಾಳುಮೆಣಸು, ಚಿನ್ನ ಹಾಗೂ ಬೆಳ್ಳಿಯ ತುಣುಕುಗಳು, ಚಾಲ್ತಿಯಲ್ಲಿರುವ ನಾಣ್ಯಗಳನ್ನು ಒಪ್ಪ ಓರಣವಾಗಿ ಜೋಡಿಸಿ ದೇವರ ಬಲಿಯ ಕೊನೆಯ ಸುತ್ತಿನಲ್ಲಿ ಉಳ್ಳಾಲ್ತಿ ಅಮ್ಮನವರ ನಡೆಯಲ್ಲಿ ಕನಕಾಭಿಷೇಕ ನೆರವೇರಿಸಲಾಯಿತು. ಪ್ರತಿ ವರ್ಷ ದೇವಳದ ಸಿಬ್ಬಂದಿ ಪದ್ಮನಾಭ ಅವರು ಕನಕಾಭಿಷೇಕದ ಸುವಸ್ತುಗಳನ್ನು ಜೋಡಿಸುವ ಕಾರ್ಯ ಮಾಡುತ್ತಿದ್ದಾರೆ.

ಈ ಸಂದರ್ಭ ಪ್ರಧಾನ ಅರ್ಚಕ ವೇ. ಮೂ. ವಸಂತ ಕೆದಿಲಾಯ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ. ಶೆಟ್ಟಿ, ಮಹಾಬಲ ರೈ ವಳತ್ತಡ್ಕ, ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ, ವಿನಯ ಸುವರ್ಣ, ಈಶ್ವರ ಬೇಡೆಕರ್, ಹಿರಿಯರಾದ ಕಿಟ್ಟಣ್ಣ ಗೌಡ, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಮಚಂದ್ರ ಕಾಮತ್, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಸದಸ್ಯ ನಿಹಾಲ್ ಪಿ. ಶೆಟ್ಟಿ, ನಗರಸಭೆ ನಿಕಟಪೂರ್ವ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಹೆಚ್. ಉದಯ, ಸುದೇಶ್ ಚಿಕ್ಕಪುತ್ತೂರು, ಪಿ.ಜಿ. ಚಂದ್ರಶೇಖ‌ರ್ ರಾವ್, ರತ್ನಾಕರ ನಾಕ್, ಶ್ರೀಧ‌ರ್ ಪಟ್ಲ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *