ಕಡಬ: ಅಂಚೆ ಇಲಾಖೆಯಲ್ಲಿ ಬರೋಬ್ಬರಿ 44 ವರ್ಷಗಳ ಕಾಲ ನಿರಂತರವಾಗಿ, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಕಡಬ ಉಪ ಅಂಚೆಕಚೇರಿಯ ಗ್ರಾಮೀಣ ಅಂಚೆ ಸಹಾಯಕ ಬಾಲಕೃಷ್ಣ ಎಂ. ಪೂಜಾರಿಯವರಿಗೆ ಜ. 15ರ ಸಂಜೆ ಅದ್ದೂರಿ ಹಾಗೂ ಭಾವಪೂರ್ಣ ಬೀಳ್ಕೊಡುಗೆಯನ್ನು ನೀಡಲಾಯಿತು. ಕಡಬ ಉಪ ಅಂಚೆಕಚೇರಿಯಲ್ಲಿ ನಡೆದ ಈ ಸಮಾರಂಭದಲ್ಲಿ ಸಹೋದ್ಯೋಗಿಗಳು ಹಾಗೂ ಗಣ್ಯರು ಅವರ ವೃತ್ತಿ ಬದುಕಿನ ಸಾಧನೆಯನ್ನು ಕೊಂಡಾಡಿದರು.





ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸುಳ್ಯ ಸಬ್‌ಡಿವಿಜನ್ ಅಂಚೆ ನಿರೀಕ್ಷಕರಾದ ವಿನೋದ್ ಕುಮಾರ್‌ರವರು ಬಾಲಕೃಷ್ಣ ಪೂಜಾರಿಯವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, “ಒಂದೇ ಇಲಾಖೆಯಲ್ಲಿ 44 ವರ್ಷಗಳ ಕಾಲ ಸುದೀರ್ಘ ಕಾಲ ಕೆಲಸ ಮಾಡುವುದು ಸಾಮಾನ್ಯ ವಿಷಯವಲ್ಲ. ಬಾಲಕೃಷ್ಣ ಅವರು ಅಚ್ಚುಕಟ್ಟಾದ ಕೆಲಸದ ಮೂಲಕ ಇಲಾಖೆಯ ಗೌರವವನ್ನು ಹೆಚ್ಚಿಸಿದ್ದಾರೆ. ಅವರ ಮುಂದಿನ ನಿವೃತ್ತ ಜೀವನವು ಸುಖ-ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ,” ಎಂದು ಹಾರೈಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲಕೃಷ್ಣ ಪೂಜಾರಿಯವರು, ಭಾವುಕರಾಗಿ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು. “ದಕ್ಷತೆ ಮತ್ತು ಪ್ರಾಮಾಣಿಕತೆಗೆ ಇವತ್ತು ಬೆಲೆ ಸಿಕ್ಕಿದೆ. ಈ 44 ವರ್ಷಗಳಲ್ಲಿ ಸಾಕಷ್ಟು ಸಿಹಿ-ಕಹಿ ಅನುಭವಗಳಾಗಿವೆ. ಸಾರ್ವಜನಿಕರೊಂದಿಗೆ ಹೊಂದಿದ್ದ ಪ್ರೀತಿ-ವಿಶ್ವಾಸವೇ ನನಗೆ ಆಸ್ತಿ. ಅಂಚೆ ಇಲಾಖೆಯಲ್ಲಿ ಹೆಮ್ಮೆಯಿಂದ ಸೇವೆ ಸಲ್ಲಿಸಿ ನಿವೃತ್ತನಾಗುತ್ತಿದ್ದೇನೆ,” ಎಂದು ನುಡಿದರು.
ಪುತ್ತೂರು ವಿಭಾಗ, ಕಡಬ ಹಾಗೂ ನೆಟ್ಟಣ ಅಂಚೆ ಕಚೇರಿಯ ಸಿಬ್ಬಂದಿಗಳು ಬಾಲಕೃಷ್ಣ ಪೂಜಾರಿಯವರನ್ನು ಗೌರವಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ವಿವಿಧ ಶಾಖೆಗಳ ಪದಾಧಿಕಾರಿಗಳಾದ ರಮೇಶ್, ಬಾಬು, ಧನಲಕ್ಷ್ಮೀ, ಶಿವಪ್ಪ, ಸಾಗರ್, ಭಾರತಿ, ಸುಂದರ್, ಕುಮಾರ್, ಕಮಾಲಾಕ್ಷ, ಮಲ್ಲಮ್ಮ, ಸೌಜನ್ಯ, ಸಂಗಪ್ಪ, ಉಷಾ ಮತ್ತು ದಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು. ವಿಶೇಷ ಅತಿಥಿಯಾಗಿ ಭೂಷಣ್ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಬಾಲಕೃಷ್ಣ ಪೂಜಾರಿಯವರ ಪತ್ನಿ ಮೀರಾ, ಸಹೋದರಿಯರಾದ ರತ್ನಾವತಿ ಬರೆಂಬೆಟ್ಟು ಮತ್ತು ಶೀಲಾವತಿ ಕುಟ್ರುಪ್ಪಾಡಿ ಹಾಗೂ ಸೊಸೆ ಶಿಲ್ಪಾ ಉಪಸ್ಥಿತರಿದ್ದು ಸಂಭ್ರಮ ಹಂಚಿಕೊಂಡರು. ಕುಟ್ರುಪ್ಪಾಡಿ ಅಂಚೆ ಕಚೇರಿಯ ಬಿಪಿಎಂ ಕೊರಗಪ್ಪ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸ್ವಾಗತಿಸಿ, ನಿರೂಪಿಸಿದರು.


