ಮಂಗಳೂರು:
ಎಬಿವಿಪಿ ಬೆಂಬಲಿತ ಮಂಗಳೂರು ವಿಭಾಗದ ಆಲ್ ಕಾಲೇಜ್ ಸ್ಟುಡೆಂಟ್ಸ್ ಯೂನಿಯನ್ ವತಿಯಿಂದ “ಸ್ಕ್ರೀನ್ ಟೈಮ್ ಟು ಗ್ರೀನ್ ಟೈಮ್” ಎಂಬ ಘೋಷಣೆಯಡಿ ಕುಮಾರಪರ್ವತಕ್ಕೆ ಹೈಕಿಂಗ್ ಹಾಗೂ ಟ್ರೆಕ್ಕಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಸ್ಕ್ರೀನ್ ಅವಲಂಬನೆಯನ್ನು ಕಡಿಮೆ ಮಾಡಿ, ಆರೋಗ್ಯಕರ ಹಾಗೂ ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಎಬಿವಿಪಿಯ ರಾಷ್ಟ್ರೀಯ ಮಟ್ಟದ ಉಪಕ್ರಮದ ಭಾಗವಾಗಿ ಹಮ್ಮಿಕೊಳ್ಳಲಾಗಿದೆ.




ಒಂದು ದಿನದ ಈ ಟ್ರೆಕ್ಕಿಂಗ್ ಕಾರ್ಯಕ್ರಮವು ಜನವರಿ 17, 2026 (ಶನಿವಾರ) ರಂದು ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯವನ್ನು ಆಧಾರ ಕೇಂದ್ರವಾಗಿಟ್ಟುಕೊಂಡಿದೆ. ಮಂಗಳೂರು ವಿಭಾಗದ ಎಲ್ಲಾ ಕಾಲೇಜುಗಳ ಸಹಭಾಗಿತ್ವದೊಂದಿಗೆ ಕಾರ್ಯಕ್ರಮವನ್ನು ಸಂಘಟಿಸಲಾಗಿದ್ದು, ವಿದ್ಯಾರ್ಥಿಗಳ ದೈಹಿಕ ಕ್ಷಮತೆ, ಪರಿಸರ ಜಾಗೃತಿ, ಶಿಸ್ತು ಹಾಗೂ ತಂಡದ ಮನೋಭಾವವನ್ನು ಬೆಳೆಸುವುದೇ ಇದರ ಮುಖ್ಯ ಉದ್ದೇಶವಾಗಿದೆ.
ಈ ಕುರಿತು ಮಾತನಾಡಿದ ಎಬಿವಿಪಿ ಬೆಂಬಲಿತ ಆಲ್ ಕಾಲೇಜ್ ಸ್ಟುಡೆಂಟ್ಸ್ ಯೂನಿಯನ್, ಮಂಗಳೂರು ವಿಭಾಗದ ಅಧ್ಯಕ್ಷರಾದ ಮುಳಿಯ ಸಾತ್ವಿಕ್ ಅವರು, “‘ಸ್ಕ್ರೀನ್ ಟೈಮ್ ಟು ಗ್ರೀನ್ ಟೈಮ್’ ಎಬಿವಿಪಿಯ ರಾಷ್ಟ್ರೀಯ ಮಟ್ಟದ ಉಪಕ್ರಮವಾಗಿದ್ದು, ವಿದ್ಯಾರ್ಥಿಗಳನ್ನು ಅತಿಯಾದ ಸ್ಕ್ರೀನ್ ಬಳಕೆಯಿಂದ ದೂರ ಮಾಡಿ ಆರೋಗ್ಯಕರ ಜೀವನಶೈಲಿಯತ್ತ ಕೊಂಡೊಯ್ಯುವುದೇ ಇದರ ಉದ್ದೇಶ. ಕುಮಾರಪರ್ವತ ಟ್ರೆಕ್ಕಿಂಗ್ ಮೂಲಕ ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ನೇರ ಸಂಪರ್ಕ ಹೊಂದಿ ದೈಹಿಕ ಆರೋಗ್ಯ, ಶಿಸ್ತು ಮತ್ತು ತಂಡದ ಮನೋಭಾವವನ್ನು ಬೆಳೆಸಿಕೊಳ್ಳಲಿದ್ದಾರೆ,” ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಸೀಮಿತವಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.





