ಪುತ್ತೂರು:
ಪುತ್ತೂರಿನ ಪ್ರವಾಸಿ ತಾಣವಾದ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ವಾಸವಿರುವ ಭಿನ್ನ ಸಾಮರ್ಥ್ಯದ 15 ಮಂದಿಗೆ ಬಪ್ಪಳಿಗೆ ಅಮರ್ ಅಕ್ಬರ್ ಅಂತೋಣಿ ಸಂಘಟನೆಯ ವತಿಯಿಂದ ಜರ್ಸಿ (ವಸ್ತ್ರ) ವಿತರಣೆ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಪುತ್ತೂರಿನ ಮಹಾವೀರ ಆಸ್ಪತ್ರೆಯ ವೈದ್ಯರಾದ ಡಾ. ಪ್ರದೀಪ್ ಬೋರ್ಕರ್ ಅವರು ಮಾತನಾಡಿ, ಆಶ್ರಮದಲ್ಲಿರುವ ಮಂದಿಯನ್ನು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಾಕುತ್ತಿರುವ ಅಣ್ಣಪ್ಪ ಮತ್ತು ಜ್ಯೋತಿ ದಂಪತಿಗಳ ಸೇವೆ ಸಮಾಜದ ಅತ್ಯುನ್ನತ ಮಾನವೀಯ ಕಾರ್ಯವಾಗಿದೆ ಎಂದರು. 20ರಿಂದ 70 ವರ್ಷದೊಳಗಿನ ಭಿನ್ನ ಸಾಮರ್ಥ್ಯದ ಮಂದಿಯನ್ನು ತಮ್ಮ ಮಕ್ಕಳಂತೆ ಪೋಷಿಸುತ್ತಿರುವ ಈ ದಂಪತಿಗಳಿಗೆ ಸಮಾಜದ ಹಾಗೂ ಸರ್ಕಾರದ ಇನ್ನಷ್ಟು ಸಹಕಾರ ಅಗತ್ಯವಿದೆ. ಪ್ರಜ್ಞಾ ಆಶ್ರಮಕ್ಕೆ ಸ್ವಂತ ಕಟ್ಟಡ ನಿರ್ಮಾಣದ ಕನಸು ಶೀಘ್ರವೇ ನೆರವೇರಲಿ ಎಂದು ಅವರು ಹಾರೈಸಿದರು.





ಪತ್ರಕರ್ತ ಸಂಶುದ್ದೀನ್ ಸಂಪ್ಯ ಅವರು ಮಾತನಾಡಿ, ಈ ದಂಪತಿಗಳ ಸೇವಾಕಾರ್ಯ ದೇವರ ಪೂಜೆಗಿಂತಲೂ ಮಹತ್ತರ ಪುಣ್ಯದ ಕಾರ್ಯವಾಗಿದೆ ಎಂದು ಶ್ಲಾಘಿಸಿದರು. ಬಾಡಿಗೆ ಆಧಾರದಲ್ಲಿ ನಡೆಯುತ್ತಿರುವ ಪ್ರಜ್ಞಾ ಆಶ್ರಮವು ಸ್ವಂತ ನೆಲೆಯಲ್ಲಿ ಸ್ಥಿರವಾಗಲು ಸಂಘಸಂಸ್ಥೆಗಳು, ಸಾರ್ವಜನಿಕರು ಹಾಗೂ ಸರ್ಕಾರದ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕವಾಗಿ ಎಳ್ಳು–ಬೆಲ್ಲ ವಿತರಿಸಿ, ನಂತರ ಆಶ್ರಮದಲ್ಲಿರುವ 15 ಮಂದಿಗೆ ವಸ್ತ್ರಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಡಾ. ಪ್ರದೀಪ್ ಬೋರ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಮರ್ ಅಕ್ಬರ್ ಅಂತೋಣಿ ಸಂಘಟನೆಯ ತಂಡದ ಮುಖ್ಯಸ್ಥ ರಝಾಕ್ ಬಪ್ಪಳಿಗೆ, ಸಂಘಟನೆಯ ವ್ಯವಸ್ಥಾಪಕ ಸೀತಾರಾಮ ಅಯ್ಯರ್, ಉದ್ಯಮಿ ಗಣೇಶ್ ಕಾಮತ್, ಪತ್ರಕರ್ತರಾದ ಮೇಘಾ ಪಾಲೆತ್ತಾಡಿ, ಲೋಕೇಶ್ ಬನ್ನೂರು, ಅಜಿತ್ ಕುಮಾರ್, ರಾಜೇಶ್ ಪಟ್ಟೆ, ಅನೀಶ್ ಕುಮಾರ್, ಯತೀಶ್ ಬಪ್ಪಳಿಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.




