ಪುತ್ತೂರು: ಕಡಬ ತಾಲೂಕಿನ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಲು ಕರೆಯುವ ಹಾಗೂ ಗಬ್ಬದ ಹಸುವನ್ನು ಮಾಂಸಕ್ಕಾಗಿ ಸಾಗಾಟ ನಡೆಸಲಾಗಿದೆ ಎಂದು ರೈತನ ಮೇಲೆ ದಾಖಲಾಗಿರುವ ಪ್ರಕರಣವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆ ಪುತ್ತೂರು ಸಹಾಯಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.

ಜನವರಿ 10ರಂದು ಪಿರಿಯಾಪಟ್ಟಣದ ರೈತ ಸುನೀಲ್ ಎಂಬವರು ಸ್ಥಳೀಯ ರೈತನಿಂದ ಹಾಲು ಕರೆಯುವ ಒಂದು ಹಸು, ಗಬ್ಬದ ಹಸು ಹಾಗೂ ಐದು ದಿನಗಳ ಕರು ಖರೀದಿಸಿ ಸಾಗಾಟ ಮಾಡುತ್ತಿದ್ದ ವೇಳೆ ಸುಬ್ರಹ್ಮಣ್ಯ ಬಳಿ ಭಜರಂಗದಳದ ವ್ಯಕ್ತಿಯೊಬ್ಬ ತಡೆದಿದ್ದಾನೆ. ಹಸು ಹಾಲು ಕರೆಯುವುದಾಗಿ ತಿಳಿದ ಬಳಿಕ ಆತ ಸ್ಥಳದಿಂದ ತೆರಳಿದ್ದಾನೆ. ಆದರೆ ಸುಮಾರು 10 ನಿಮಿಷಗಳ ಬಳಿಕ ಸ್ಥಳಕ್ಕೆ ಬಂದ ಸುಬ್ರಹ್ಮಣ್ಯ ಪೊಲೀಸರು ಹಸುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ರೈತಸಂಘ ಆರೋಪಿಸಿದೆ.

ಪಶುವೈದ್ಯಾಧಿಕಾರಿಗಳಿಂದ ಹಸು ಗಬ್ಬದದೋ ಅಥವಾ ಗೊಡ್ಡು ದನವೋ ಎಂಬುದನ್ನು ಪರಿಶೀಲಿಸದೇ ಪೊಲೀಸರು ಆತುರದಲ್ಲಿ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಈ ಕುರಿತು ಪುತ್ತೂರು ಸಹಾಯಕ ಆಯುಕ್ತರು ರೈತಸಂಘದವರೊಂದಿಗೆ ಮಾತನಾಡಿ, ಪಶುವೈದ್ಯರು ಸ್ಥಳದಲ್ಲೇ ಪರಿಶೀಲನೆ ನಡೆಸಿ ವರದಿ ನೀಡುವುದಾಗಿ ತಿಳಿಸಿದ್ದು, ಈ ಪ್ರಕರಣದಲ್ಲಿ ಪೊಲೀಸರ ಕ್ರಮ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ರೈತಸಂಘ ತಿಳಿಸಿದೆ.
ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಒಂದು ವೇಳೆ ಸಂಜೆಯೊಳಗೆ ಪಶುವೈದ್ಯರ ವರದಿ ನೀಡದಿದ್ದರೆ ತಾಲೂಕು ದಂಡಾಧಿಕಾರಿ ಕಚೇರಿಗೆ ಬೀಗ ಜಡಿದು ಹಗಲು-ರಾತ್ರಿ ಧರಣಿ ನಡೆಸಲಾಗುವುದು ಎಂದು ರಾಜ್ಯ ರೈತಸಂಘ ಹಸಿರುಸೇನೆಯ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಎಚ್ಚರಿಕೆ ನೀಡಿದರು.
ಹಣ ಮತ್ತು ಮೊಬೈಲ್ ಕಸಿದುಕೊಂಡ ಆರೋಪ
ಪ್ರತಿಭಟನೆಯಲ್ಲಿ ಪೊಲೀಸರು ರೈತನ ಬಳಿ ಇದ್ದ ಮೊಬೈಲ್ ಫೋನ್ ಕಸಿದುಕೊಂಡು ಯಾರಿಗೂ ಕರೆ ಮಾಡಲು ಅವಕಾಶ ನೀಡಿಲ್ಲ. “ಬಿಟ್ಟುಬಿಡುತ್ತೇವೆ” ಎಂದು ಹೇಳಿ ಪೆಟ್ರೋಲ್ ಬಂಕ್‌ನಲ್ಲಿ ಪೋನ್‌ಪೇ ಮೂಲಕ 3,000 ರೂ. ಹಣ ಪಡೆದುಕೊಂಡಿದ್ದಾರೆ. ನಂತರ ಪುತ್ತೂರಿಗೆ ಬರಲು ಮತ್ತೆ 3,000 ರೂ. ಕಸಿದುಕೊಂಡಿದ್ದಾರೆ ಎಂದು ರೈತಸಂಘ ಗಂಭೀರ ಆರೋಪ ಮಾಡಿದೆ.
ಮಾಧ್ಯಮಗಳ ಮುಂದೆ ಮಾತನಾಡಿದ ರೈತ ಸುನೀಲ್, “ಜೋಳ ಮಾರಿದ ದುಡ್ಡಿನಲ್ಲಿ ಹಸು ಖರೀದಿ ಮಾಡಿದ್ದೇನೆ. ಈಗ ದುಡ್ಡೂ ಇಲ್ಲ, ಹಸುವೂ ಇಲ್ಲ. ಹಾಲು ಕರೆಯುವ ಹಸುವನ್ನು ನಾವು ದೇವರಂತೆ ಪೂಜಿಸುವವರು. ಯಾರಾದರೂ ಇಂಥ ಹಸುವನ್ನು ಕಸಾಯಿಖಾನೆಗೆ ಕೊಡುತ್ತಾರಾ?” ಎಂದು ನೋವು ತೋಡಿಕೊಂಡರು.

ಪ್ರತಿಭಟನೆಯಲ್ಲಿ ಯುವ ಘಟಕದ ಅಧ್ಯಕ್ಷ ವಿನೋದ್ ಗೌಡ, ರಾಜ್ಯ ಮಹಿಳಾ ಸಂಘದ ಅಧ್ಯಕ್ಷೆ ಅಣ್ಣಪೂರ್ಣೇಶ್ವರಿ, ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ರಾಜ್ಯ ಸಂಚಾಲಕ ಚಂದ್ರ, ಪಿರಿಯಾಪಟ್ಟಣ ಅಧ್ಯಕ್ಷ ಅಜಿತ್ ಸೇರಿದಂತೆ ಉತ್ತರ ಕನ್ನಡ, ಮೈಸೂರು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ನೂರಾರು ರೈತರು ಪಾಲ್ಗೊಂಡಿದ್ದರು.
ನಂತರ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ರೈತರೊಂದಿಗೆ ಮಾತುಕತೆ ನಡೆಯಿತು. ಈ ಸಂದರ್ಭ ತಹಶೀಲ್ದಾರ್ ಕೂಡಲಗಿ, ಡಿವೈಎಸ್ಪಿ ಅರುಣ್ ನಾಗೇಗೌಡ ಹಾಗೂ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *