ಪುತ್ತೂರು: ಸುನ್ನಿ ಯುವಜನ ಸಂಘ ಕರ್ನಾಟಕ (ಎಸ್ವೈಎಸ್) ಪುತ್ತೂರು ವಲಯದ ವತಿಯಿಂದ ‘ಮಾದರಿ ಮದುವೆ’ ಎಂಬ ಹೆಸರಿನ ಏಕದಿನ ಪ್ರಭಾಷಣ ಕಾರ್ಯಕ್ರಮವು ಜನವರಿ 19ರಂದು ಸೋಮವಾರ ಸಂಜೆ 6.30ಕ್ಕೆ ಪುತ್ತೂರಿನ ಕೂರ್ನಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಸಂಚಾಲಕ ಅಬೂಶಝ ಅಬ್ದುಲ್ ರಜಾಕ್ ಖಾಸಿಮಿ ಕೂರ್ನಡ್ಕ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.



ಎಸ್ವೈಎಸ್ ಕರ್ನಾಟಕ ರಾಜ್ಯ ಸಮಿತಿಯ ‘ಶತದಿನ–2025’ ಅಭಿಯಾನವು ಕಳೆದ ನವೆಂಬರ್ 8ರಂದು ಆರಂಭಗೊಂಡಿದ್ದು, ಫೆಬ್ರವರಿ 15ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಹತ್ತಾರು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಅದರ ಅಂಗವಾಗಿ ಜನವರಿ 19ರಂದು ‘ಮಾದರಿ ಮದುವೆ’ ಪ್ರಭಾಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮದುವೆಗಳು ಶ್ರೀಮಂತರು ನಡೆಸುವ ಆಡಂಬರದ ಪ್ರಭಾವದಿಂದ ಮಧ್ಯಮವರ್ಗ ಹಾಗೂ ಬಡ ಕುಟುಂಬಗಳು ಸಾಲಸೋಲ ಮಾಡಿಕೊಂಡು ದುಂದುವೆಚ್ಚದ ಮದುವೆ ನಡೆಸುವ ಪರಿಸ್ಥಿತಿಗೆ ತಲುಪುತ್ತಿದ್ದು, ಇದು ಗಂಭೀರ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿದೆ.




ಆಡಂಬರದ ಮದುವೆಗಳ ಹೆಸರಿನಲ್ಲಿ ಅನಾಚಾರಗಳು ನಡೆಯುವ ಸಾಧ್ಯತೆಯೂ ಹೆಚ್ಚಿದೆ. ಇಸ್ಲಾಂ ಧರ್ಮದಲ್ಲಿ ಸರಳ ಮದುವೆಗೆ ಆದ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ಕೂರ್ನಡ್ಕ ಪೀರ್ ಮೊಹಲ್ಲಾ ಮುಹ್ಯುದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಬಹು. ಅಬ್ದುಲ್ ಬಾಸಿತ್ ಹುದವಿ ಅಲ್ ಅಝ್ಹರಿ ಉದ್ಘಾಟಿಸಲಿದ್ದು, ಎಸ್ವೈಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಸಂದೇಶ ಭಾಷಣ ಮಾಡಲಿದ್ದಾರೆ. ಪೇರೋಡ್ ಮಹಮ್ಮದ್ ಅಝ್ಹರಿ ಅವರು ಮುಖ್ಯ ಪ್ರಭಾಷಣ ನೀಡಲಿದ್ದಾರೆ.
ಹಿಂದೆ ಮುಸ್ಲಿಂ ಸಮಾಜದಲ್ಲಿ ವರದಕ್ಷಿಣೆ ಎಂಬ ಪಿಡುಗು ವ್ಯಾಪಕವಾಗಿದ್ದು, ಜಾಗೃತಿಯ ಫಲವಾಗಿ ಇಂದು ಅದು ಬಹುತೇಕ ನಿಂತು ಹೋಗಿದೆ. ಇದೀಗ ದುಂದುವೆಚ್ಚದ ಮದುವೆ ಸಂಸ್ಕೃತಿಯನ್ನು ತಡೆದು ‘ಮಾದರಿ ಮದುವೆ’ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಶ್ರೀಮಂತರು ತಮ್ಮ ಮಕ್ಕಳ ಮದುವೆಯ ಜತೆಗೆ ಒಂದೆರಡು ಬಡ ಕುಟುಂಬಗಳ ಜೋಡಿಗಳ ಮದುವೆ ನಡೆಸುವ ಮೂಲಕ ಅಥವಾ ಸಾಮೂಹಿಕ ಮದುವೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಕರೀಮ್ ಹಾಜಿ ಕಾವೇರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಜ್ ಚೆನ್ನಾರ್, ಕೋಶಾಧಿಕಾರಿ ಸಮೀರ್ ಕೊಡಿಪ್ಪಾಡಿ ಹಾಗೂ ಸಂಚಾಲಕ ಅಬ್ದುಲ್ ರಝಾಕ್ ಹಿಮಾಮಿ ರೆಂಜ ಉಪಸ್ಥಿತರಿದ್ದರು.


