ಪುತ್ತೂರು: ಪುತ್ತೂರು ತಾಲೂಕು ಚೆಸ್ ಅಸೋಸಿಯೇಶನ್ ವತಿಯಿಂದ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಸಹಕಾರದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಜ.24 ಮತ್ತು 25ರಂದು 2 ದಿನಗಳ ಫಿಡೆ ರ್ಯಾಪಿಡ್ ಚೆಸ್ ಟೂರ್ನಮೆಂಟ್ ನಡೆಯಲಿದೆ.
ಪುತ್ತೂರು ತಾಲೂಕು ಚೆಸ್ ಅಸೋಸಿಯೇಶನ್ ಅಧ್ಯಕ್ಷೆ ಸತ್ಯಲತಾ ರೈಮತ್ತುಸಂಚಾಲಕಿ ಉಮಾ ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಂತಾರಾಷ್ಟ್ರೀಯ ದರ್ಜೆಯ ಪಂದ್ಯಾಟ ನಡೆಯಲಿದ್ದು, ಈ ಮಾದರಿಯ ಚೆಸ್ ಟೂರ್ನಮೆಂಟ್ ಪುತ್ತೂರಿನಲ್ಲಿ ಮೊದಲ ಬಾರಿ ಆಯೋಜನೆಯಾಗುತ್ತಿದೆ. ಸುಮಾರು 300ಕ್ಕಿಂತಲೂ ಅಧಿಕ ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಇದು ಫಿಡೆ ರೇಟಿಂಗ್ ಪಂದ್ಯಾವಳಿ ಆಗಿರುವುದರಿಂದ ಆಟಗಾರರಿಗೆ ತಮ್ಮ ಫಿಡೆ ರೇಟಿಂಗ್ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಲಿದೆ. ಪುತ್ತೂರು ಮಾತ್ರವಲ್ಲದೆ, ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ ನಾನಾ ಭಾಗ ಮತ್ತು ಪಕ್ಕದ ಕೇರಳದಿಂದಲೂ ಆಟಗಾರರು ಭಾಗವಹಿಸಲಿದ್ದಾರೆ. 5 ವಯೋಮಾನಗಳ ವಿಭಾಗ ಮತ್ತು ರೇಟಿಂಗ್ ವಿಭಾಗದಲ್ಲಿ ಟೂರ್ನಮೆಂಟ್ ನಡೆಯಲಿದೆ. ಒಟ್ಟು 3 ಲಕ್ಷ ರೂ. ಮೊತ್ತದ ನಗದು ಬಹುಮಾನ ಹಾಗೂ 109 ಟ್ರೋಫಿಗಳು ಬೇರೆ ಬೇರೆ ವಿಭಾಗಗಳ ವಿಜೇತರಿಗೆ ಸಿಗಲಿದೆ. ಒಟ್ಟು 9 ಸುತ್ತುಗಳಲ್ಲಿ ಪಂದ್ಯಾಟ ನಡೆಯಲಿದ್ದು, ಎಲ್ಲ ಆಟಗಾರರು ಎಲ್ಲ ಸುತ್ತುಗಳಲ್ಲೂ ಆಡಬೇಕಾಗುತ್ತದೆ. ದೂರದಿಂದ ಬರುವ ಆಟಗಾರರಿಗೆ ಅಗತ್ಯ ಬಿದ್ದಲ್ಲಿ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಿಕೊಡಲಾಗುವುದು. 24ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, 25ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದವರು ವಿವರಿಸಿದರು.

ಚೆಸ್ ಆಟಗಾರ ವಿದ್ಯಾರ್ಥಿಗಳ ಹೆತ್ತವರು ಸೇರಿಕೊಂಡು 2020ರಲ್ಲಿ ಪುತ್ತೂರು ತಾಲೂಕು ಚೆಸ್ ಎಸೋಸಿಯೇಶನ್ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಈಗಾಗಲೇ ಪುತ್ತೂರಿನಲ್ಲಿ ಅನೇಕ ಪಂದ್ಯಾಟಗಳನ್ನು ಆಯೋಜಿಸಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ದರ್ಜೆಯ ಫಿಡೆ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್ ನಡೆಯುತ್ತಿದೆ. ಆಲ್ ಇಂಡಿಯಾ ಚೆಸ್ ಫೆಡರೇಶನ್, ಕರ್ನಾಟಕ ಸ್ಟೇಟ್ ಚೆಸ್ ಅಕಾಡೆಮಿ ಮತ್ತು ದಕ್ಷಿಣ ಕನ್ನಡ ಚೆಸ್ ಅಕಾಡೆಮಿ ಸಂಸ್ಥೆಗಳ ಅಡಿಯಲ್ಲಿ ಪುತ್ತೂರು ತಾಲೂಕು ಚೆಸ್ ಎಸೋಸಿಯೇಶನ್ ಕಾರ್ಯಾಚರಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ತಾಲೂಕು ಚೆಸ್ ಎಸೋಸಿಯೇಶನ್ ಕಾರ್ಯದರ್ಶಿ ದಾಮೋದರ ಕಣಜಾಲ್, ಕೋಶಾಕಾರಿ ಡಾ.ಎಸ್.ಎಂ. ಪ್ರಸಾದ್, ಸದಸ್ಯ ದಿನೇಶ್ ಪ್ರಸನ್ನ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *