ಪುತ್ತೂರು:
ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಸುಕುಮಾರ್ ರೈ, ಇಳಂತಾಜೆ ಅವರು ಕಳೆದ ಎರಡು ವರ್ಷಗಳಿಂದ ಕಷ್ಟಪಟ್ಟು ಪೋಷಿಸಿದ್ದ ಅಡಿಕೆ ಗಿಡಗಳನ್ನು ಕಾಡು ಹಂದಿಗಳು ದಾಳಿ ಮಾಡಿ ಸಂಪೂರ್ಣವಾಗಿ ನಾಶಪಡಿಸಿದ ಘಟನೆ ನಡೆದಿದೆ. ಇದರಿಂದಾಗಿ ರೈತನ ಪರಿಶ್ರಮದ ಫಲ ನಾಶವಾಗಿದ್ದು, ಕುಟುಂಬ ತೀವ್ರ ಬೇಸರಕ್ಕೆ ಒಳಗಾಗಿದೆ.

ಕಾಡು ಪ್ರಾಣಿಗಳ ಹಾವಳಿಯಿಂದ ಉಂಟಾಗಿರುವ ಕೃಷಿ ಹಾನಿಯ ಕುರಿತು ಅರಣ್ಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ. ಜೊತೆಗೆ ರೈತರ ಕೃಷಿ ರಕ್ಷಣೆಗೆ ಬಳಸುತ್ತಿದ್ದ ಕೋವಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಕಾನೂನು ನೆಪವೊಡ್ಡಿ ಡೆಪಾಸಿಟ್ ಮಾಡಿಸಿಕೊಂಡಿರುವುದನ್ನು ವಿರೋಧಿಸಿ, ರೈತರಿಗೆ ಆ ಕೋವಿಯನ್ನು ಹಿಂತಿರುಗಿಸಿ ಅಧಿಕಾರಿಗಳು ನಾಗರಿಕ ಸೇವೆಯಲ್ಲಿ ಕೈಜೋಡಿಸಬೇಕೆಂದು ಒತ್ತಾಯಿಸಲಾಯಿತು.

ಮುಂದಿನ ದಿನಗಳಲ್ಲಿ ಸರ್ಕಾರ ರೈತರ ಸಮಸ್ಯೆಗಳ ಕುರಿತು ವಿಶೇಷ ಕಾಳಜಿ ವಹಿಸದಿದ್ದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸ್ಥಳಕ್ಕೆ ಭೇಟಿ ನೀಡಿ ಕೃಷಿ ಹಾನಿ ವೀಕ್ಷಣೆ ಮಾಡಿ, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದರು.
ಈ ವೇಳೆ ಬಿಜೆಪಿ ಕೆಯ್ಯೂರು ಶಕ್ತಿ ಕೇಂದ್ರದ ಸಂಚಾಲಕ ಶರತ್ ಕುಮಾರ್ ರೈ, ದೇರ್ಲ ಸತೀಶ್ ರೈ, ಕೆಯ್ಯೂರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *