ಕಡಬ, ಜ. 19: ಸ್ಥಳೀಯಾಡಳಿತಗಳು ಸರಕಾರದ ಅನುದಾನಕ್ಕೆ ಕಾಯದೆ ತಮಗೆ ಸೇರಿದ ಆಸ್ತಿಗಳನ್ನು ರಕ್ಷಣೆ ಮಾಡಿ ಅಭಿವೃದ್ಧಿಗೊಳಿಸಿ ಆರ್ಥಿಕ ಕ್ರೋಢೀಕರಣ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ವಿ.ಪ. ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.
ಅವರು ಸೋಮವಾರ ಕಡಬ ಪಟ್ಟಣ ಪಂಚಾಯತ್‌ನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.



ನನಗೆ ಎರಡು ಜಿಲ್ಲೆಗಳ 13 ಶಾಸಕರ ಕ್ಷೇತ್ರ ವ್ಯಾಪ್ತಿಇದೆ.ಶಾಸಕರಿಗೆಸಿಗುವಷ್ಟು ಅನುದಾನ ನನಗೆ ಸಿಗುತ್ತಿಲ್ಲ. ಹಾಗಾಗಿ ನನಗೆ ಅನು ದಾನದ ಭರವಸೆ ನೀಡಲು ಸಾಧ್ಯ ವಾಗುವುದಿಲ್ಲ. ಅಧಿಕಾರಿಗಳಿಗೆ ಪಂಚಾಯಿತಿ ವ್ಯಾಪ್ತಿಯ ಜಾಗಗಳನ್ನು ಭದ್ರಪಡಿಸಿ ಪಂಚಾಯತ್ ಆಸ್ತಿಯನ್ನು ರಕ್ಷಣೆ ಮಾಡುವ ಜವಾಬ್ದಾರಿ ಇದೆ. ಪಂಚಾಯತ್ ಎಂದರೆ ಕೇವಲ ಪರವಾನಿಗೆ ನೀಡುವುದು,ತೆರಿಗೆ ಸಂಗ್ರಹಿಸುವುದು ಮಾತ್ರವಲ್ಲ. ಪಂಚಾಯತ್ ವ್ಯಾಪ್ತಿಯ ಜಾಗವನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದಲ್ಲಿ ಆರ್ಥಿಕ ಸಂಗ್ರಹಕ್ಕೆ ದಾರಿಯಾಗುತ್ತದೆ. ಜಾಗವನ್ನು ಯಾವುದೇ ಉದ್ದೇಶಕ್ಕೆ ಮೀಸಲಿಟ್ಟರೂ ಅದಕ್ಕೆ ಪಹಣಿ ಮಾಡಿಸುವುದು ಮುಖ್ಯವಾಗುತ್ತದೆ. ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ನೀಡಿ ಹೆಚ್ಚಿನ ಆದೆಯ ಸೃಜಿಸುವುದನ್ನು ನೋಡಿಕೊಳ್ಳಬೇಕು ಎಂದು ಹೇಳಿದ ಭಂಡಾರಿ ಅವರು ಆಸ್ತಿ ಸಂರಕ್ಷಣೆಗೆ ಸಮಸ್ಯೆ ಇದ್ದರೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.


ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ. ಹನೀಫ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ವಿವಿಧೆಡೆ ಭೇಟಿ: ಕಡಬ ತಾಲೂಕಿನ ಕೊಲ. ರಾಮಕುಂಜ, ಆಲಂಕಾರು, ಪೆರಾಬೆ, ಕುಟ್ರುಪ್ಪಾಡಿ, ಮರ್ದಾಳ, ಐತ್ತೂರು, ಬಿಳಿನೆಲೆ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗಳಿಗೆ ಮಂಜುನಾಥ ಭಂಡಾರಿ ಅವರು ಭೇಟಿ ನೀಡಿ ಸಭೆ ನಡೆಸಿ ಪಂಚಾಯತ್‌ಗಳ ಕುಂದುಕೊರತೆಗಳನ್ನು ಆಲಿಸಿದರು.


