ಸುಬ್ರಹ್ಮಣ್ಯ:
ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ 5,617 ಅಡಿ ಎತ್ತರದ ಕುಮಾರ ಪರ್ವತಕ್ಕೆ ಸಾಹಸಮಯ ಚಾರಣವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಸುಮಾರು 24 ಕಿ.ಮೀ ದೂರವನ್ನು 12.30 ಗಂಟೆಗಳ ಕಾಲ ನಡೆದು ಮುಗಿಸಿದ ಈ ಚಾರಣ ಕಾರ್ಯಕ್ರಮದಲ್ಲಿ ಮಂಗಳೂರು, ಸುಳ್ಯ, ಕಡಬ, ಕೊಡಗು, ಸುಬ್ರಹ್ಮಣ್ಯ ಹಾಗೂ ಬೆಂಗಳೂರು ಭಾಗಗಳಿಂದ ಬಂದ 24 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ದಟ್ಟ ಅರಣ್ಯಗಳು, ತೆರೆದ ಹುಲ್ಲುಗಾವಲುಗಳು ಹಾಗೂ ಕಲ್ಲುಮಯ ಪರ್ವತ ಶೃಂಗಗಳ ಮೂಲಕ ಸಾಗಿದ ಈ ಚಾರಣವು ಭಾಗವಹಿಸಿದ ವಿದ್ಯಾರ್ಥಿಗಳ ದೈಹಿಕ ಸಹನಶೀಲತೆ, ಆತ್ಮವಿಶ್ವಾಸ ಮತ್ತು ಮಾನಸಿಕ ದೃಢತೆಯನ್ನು ಪರೀಕ್ಷಿಸುವಂತಹ ಅನುಭವವಾಗಿತ್ತು.
ಈ ಚಾರಣವನ್ನು ಎಬಿವಿಪಿಯ ರಾಷ್ಟ್ರೀಯ ಅಭಿಯಾನ “Screen Time to Activity Time” ಅಡಿಯಲ್ಲಿ “Screen Time to Green Time” ಎಂಬ ಆಶಯದೊಂದಿಗೆ ನಡೆಸಲಾಯಿತು. ಮುಳಿಯ ಸಾತ್ವಿಕ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ವಿದ್ಯಾರ್ಥಿಗಳನ್ನು ಅತಿಯಾದ ಮೊಬೈಲ್ ಮತ್ತು ಪರದೆ ಬಳಕೆಯಿಂದ ದೂರವಿಟ್ಟು ದೈಹಿಕ ಚಟುವಟಿಕೆಗಳು, ಪ್ರಕೃತಿಯೊಂದಿಗೆ ನೇರ ಸಂಪರ್ಕ ಹಾಗೂ ಉತ್ತಮ ಮಾನಸಿಕ ಆರೋಗ್ಯದತ್ತ ಪ್ರೇರೇಪಿಸುವುದಾಗಿತ್ತು.

ಈ ಸಂದರ್ಭ ಮಾತನಾಡಿದ ಮುಳಿಯ ಸಾತ್ವಿಕ್, ಇಂತಹ ಸಾಹಸಮಯ ಹಾಗೂ ಹೊರಾಂಗಣ ಚಟುವಟಿಕೆಗಳು ವಿದ್ಯಾರ್ಥಿಗಳ ಶಕ್ತಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ಬಳಸಿ ಕೊಳ್ಳಲು ಅತ್ಯಂತ ಅಗತ್ಯವೆಂದು ಹೇಳಿದರು. ಚಾರಣದಂತಹ ಚಟುವಟಿಕೆಗಳು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ದೃಢತೆ, ಶಿಸ್ತು ಮತ್ತು ಸಹಕಾರ ಮನೋಭಾವವನ್ನು ಬೆಳೆಸುತ್ತವೆ ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳನ್ನು ಪರದೆಗಳಿಂದ ಹೊರತಂದು ಸಕ್ರಿಯ, ಆರೋಗ್ಯಕರ ಹಾಗೂ ಮೌಲ್ಯಾಧಾರಿತ ಜೀವನಶೈಲಿಯತ್ತ ಒಯ್ಯುವಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *