ಪುತ್ತೂರು: ಕುಂಬ್ರ ಶ್ರೀ ರಾಮಗಿರಿಯಲ್ಲಿರುವ ಶ್ರೀ ರಾಮ ಭಜನಾ ಮಂದಿರದ ಪುನರ್ ನಿರ್ಮಾಣದ ಸಂಕಲ್ಪದೊಂದಿಗೆ ಪುತ್ತೂರು ತಾಲೂಕಿನಲ್ಲೇ ಪ್ರಥಮ ಬಾರಿಗೆ ಶ್ರೀ ರಾಮ ತಾರಕ ಯಜ್ಞ ಮತ್ತು ಶ್ರೀ ರಾಮ ನಾಮ ಜಪ ಸಮರ್ಪಣೆ ಕಾರ್ಯಕ್ರಮವು ಜ.25 ಮತ್ತು 26ರಂದು ನಡೆಯಲಿದೆ ಎಂದು ಶ್ರೀ ರಾಮ ಭಜನಾ ಮಂದಿರದ ಆಡಳಿತ ಸಮಿತಿ ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.



ನಮ್ಮ ಗ್ರಾಮದಲ್ಲಿ ದೇವಸ್ಥಾನಗಳಿಲ್ಲದಿದ್ದರೂ ಸುಮಾರು 50 ವರ್ಷಗಳ ಇತಿಹಾಸ ಇರುವ ಮಂದಿರದಲ್ಲಿ ದೇವಸ್ಥಾನಗಳಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇದೀಗ ಮಂದಿರದ ಪುನರ್ ನಿರ್ಮಾಣದ ಸಂಕಲ್ಪದೊಂದಿಗೆ ಮಾಡಿದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಶ್ರೀ ಕ್ಷೇತ್ರದ ಸಾನಿಧ್ಯ ವೃದ್ಧಿಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಆಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ನಡೆದ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಜ.25ಕ್ಕೆ ದೇವತಾ ಪ್ರಾರ್ಥನೆ, ಅಘೋರ ಹೋಮ ಸಹಿತ ಹಲವು ಕ್ರೀಯಾದಿಗಳು ನಡೆದು, ರಾತ್ರಿ ದುರ್ಗಾ ನಮಸ್ಕಾರ ನಡೆಯಲಿದೆ. ಜ.26ಕ್ಕೆ 12 ಕಾಯಿ ಶ್ರೀ ಮಹಾಗಣಪತಿ ಹೋಮ, ಶ್ರೀ ರಾಮ ತಾರಕ ಯಜ್ಞ, ಸರ್ವ ಪ್ರಾಯಶ್ಚಿತ ಆಶ್ಲೇಷ ಬಲಿ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದವರು ಹೇಳಿದರು.


ಪತ್ರಿಕಾಗೋಷ್ಟಿಯಲ್ಲಿ ಶ್ರೀ ರಾಮ ತಾರಕ ಯಜ್ಞ ಸಮಿತಿಯ ಪ್ರಧಾನ ಸಂಚಾಲಕ ರತನ್ ರೈ ಕುಂಬ್ರ, ಸಂಚಾಲಕ ರಾಜೇಶ್ ರೈ ಪರ್ಪುಂಜ, ನಾರಾಯಣ ಪೂಜಾರಿ ಕುರಿಕ್ಕಾರ ಉಪಸ್ಥಿತರಿದ್ದರು.




